ಸಿದ್ದರಾಮಯ್ಯ ರಾಜೀನಾಮೆ ನೀಡಿ ರಾಜ್ಯಕ್ಕೆ ಮಾದರಿಯಾಗಲಿ: ಅಶೋಕ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ರಾಜ್ಯಕ್ಕೆ ಮಾದರಿಯಾಗಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ತಾವು ಸಜ್ಜನ ಎಂದು ಸಿದ್ದರಸಮಯ್ಯ ಯಾವಾಗಲೂ ಹೇಳಿಕೊಳ್ಳುತ್ತಾರೆ, ಸಜ್ಜನನಾಗುವ ಅವಕಾಶ ಎಂದರೆ ಅದು ರಾಜೀನಾಮೆ ನೀಡುವುದು ಎಂದು ಅಶೋಕ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್‌ ಆದೇಶ ಬಂದಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿತ್ತು. ಅಥವಾ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದ ಕೂಡಲೇ ರಾಜೀನಾಮೆ ಕೊಡಬೇಕಿತ್ತು,ಆದರೆ ಹಾಗೆ ಮಾಡಲಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಆದೇಶಿಸಿದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್‌ ಎತ್ತಿ ಹಿಡಿದಿರುವುದರ ಜೊತೆಗೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೂಡಾ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ.

ಬಿಜೆಪಿಯಿಂದ ಸದನದಲ್ಲಿ ಈ ಕುರಿತು ಹೋರಾಟ ಮಾಡಿದಾಗ, ಇದು ಬಿಜೆಪಿ ಪ್ರೇರಿತ, ಇದು ಷಡ್ಯಂತ್ರ ಎಂದು ಸಚಿವರು ಆರೋಪ ಮಾಡಿದ್ದರು. ರಾಜಭವನಕ್ಕೆ ಮುತ್ತಿಗೆ ಹಾಕಿದ ಶಾಸಕರು, ಬಾಂಗ್ಲಾ ಮಾದರಿ ಹೋರಾಟ ಮಾಡುತ್ತೇವೆಂದು ಬೆದರಿಕೆ ಹಾಕಿದ್ದರು. ಈಗ ಇದು ತನಿಖೆಗೆ ಸೂಕ್ತ ಎಂದು ನ್ಯಾಯಾಂಗದಿಂದಲೇ ತಿಳಿದುಬಂದಿದೆ.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೇರೆ ದಾರಿಯಿಲ್ಲ. ಅವರು ಯಾವುದಕ್ಕೆ ಕಾಯುತ್ತಿದ್ದಾರೊ ತಿಳಿಯುತ್ತಿಲ್ಲ. ಬಿಜೆಪಿಯವರು ಪ್ರಕರಣ ದಾಖಲಿಸಿಲ್ಲ. ದೂರು ದಾಖಲಿಸಿದ್ದು ಆರ್‌ಟಿಐ ಕಾರ್ಯಕರ್ತರು ಹಾಗೂ ಹೋರಾಟಗಾರರು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಎಂದು ಆಪಾದನೆ ಮಾಡಿದ್ದರು. ಈಗ ನ್ಯಾಯಾಲಯಕ್ಕೆ ಯಾವ ರೀತಿಯ ಆಪಾದನೆ ಮಾಡುತ್ತಾರೆ ಎಂದು ಅಶೋಕ್ ಪ್ರಶ್ನಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಒತ್ತಾಯಿಸಿದ್ದೇವೆ. ಪಕ್ಷದ ಎಲ್ಲ ಮುಖಂಡರು ಸೇರಿ ಗುರುವಾರ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ ಎಂದು ಅಶೋಕ್ ಇದೇ‌ ವೇಳೆ ತಿಳಿಸಿದರು.