ಮೈಸೂರು: ಮೈಸೂರು ರಾಜ್ಯದ ದೊರೆಯೇ , ರಣಧೀರ ನಾಯಕನೇ,ನಿನ್ನಂತವನ್ಯಾರೂ ಇಲ್ವಲ್ಲೋ.. ಲೋಕದ ದೊರೆ ಎಂಬ ಹಾಡಿಗೆ ಪ್ರೇಕ್ಷಕರು ನಿಂತ ನಿಂತಲ್ಲೇ ಕುಣಿದು ಕುಪ್ಪಳಿಸಿದರು.
ಇದು ಎಲ್ಲಿ ಅಂತೀರಾ ಇದು ಅರಮನೆ ಮುಂಭಾಗದಲ್ಲಿ.
ಮೈಸೂರಿನ ಚಿಕ್ಕಗಡಿಯಾರದ ಮುಂಭಾಗದಲ್ಲೇ ಚಿತ್ರೀಕರಣಗೊಂಡಿರುವ ಕನ್ನಡ ನಾಡು ನುಡಿ ಕುರಿತು ಬರೆದಿರುವ ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವಾ.. ಹಾಡು ನೆರೆದಿದ್ದವರನ್ನು ಮೋಡಿ ಮಾಡಿತು.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಅರಮನೆ ಅಂಗಳದಲ್ಲಿ ಸಾಂಸ್ಕೃತಿಕ ಉಪ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಗಾನ ವೈಭವ ಶೀರ್ಷಿಕೆಯಡಿ ಅತ್ಯುತ್ತಮ ನಟಿ, ರಂಗಭೂಮಿ ಕಲಾವಿದೆ ಹಾಗೂ ಪ್ರಸಿದ್ಧ ಗಾಯಕಿ ಅನನ್ಯ ಭಟ್ ಮತ್ತು ತಂಡದವರಿಂದ ಉತ್ತಮ ಆಯ್ದ ಜಾನಪದ ಗಾನಸುಧೆ ಹರಿಸುವ ಮೂಲಕ ನೆರೆದಿದ್ದವರನ್ನು ಮೋಡಿ ಮಾಡಿದರು.
ಇದಕ್ಕೂ ಮೊದಲಿಗೆ ಗಜವದನ ಹೇ ರಂಭಾ.. ಎಂಬ ರಂಗ ಗೀತೆ ನೆರೆದಿದ್ದವರನ್ನು ಭಕ್ತಿಯ ಕಡಲಲ್ಲಿ ತೇಲುಸಿತು.
ಕೆಜಿಎಫ್ ಚಿತ್ರದ ಧೀರ ಧೀರ ಈ ಸುಲ್ತಾನ ಎಂಬ ಹಾಡು, ಬೆಟ್ಟದ ಮೇಲಿನ ಮಹದೇವ ಕುರಿತ ಶರಣು ಶರಣಯ್ಯ ಎಂಬ ಕಂಸಾಳೆ ಪದಕ್ಕೆ ಜನ ತಲೆದೂಗಿದರು.
ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನದ ಡಾ.ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವುಳ್ಳ ವೀರಂ ಚಿತ್ರದ ಎಲ್ಲರ ಮೆಚ್ಚುಗೆ ಗಳಿಸಿರುವಂತಹ ಕೇಳೋ ಮಾದೇವ… ಶಿವಾ..ಶಿವಾ.. ಹರ..ಹರ.. ಹಾಡಿನ ಮೋಡಿ ಮಾಡಿತು.
ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಅವರ ಮೃತ್ಯುಂಜಯ ದೊಡ್ಡವಾಡ ಅವರ ಸಂಗೀತ ಸಂಯೋಜನೆಯ ಜಾನಪದ ಗೀತೆ ಬಾಳ ಕಡಲಿನಲ್ಲಿ ಎರಡು ಪ್ರೀತಿಯ ದೋಣಿ, ಸೋಜುಗಾರ ಸೂಜಿ ಮಲ್ಲಿಗೆ, ಮಹದೇವ ನಿಮ್ಮ ಮಂಡೆ ಮೇಲೆ ದುಂಡು ಮಲ್ಲಿಗೆ ಹಾಡಿಗೆ ಜನ ಚಪ್ಪಾಳೆ ತಟ್ಟಿದರು.
ಇದಕ್ಕೂ ಮುನ್ನ ಕರ್ನಾಟಕ ಕಲಾಶ್ರೀಯವರಾದ ಡಾ. ರಾ.ಸಾ. ನಂದಕುಮಾರ್ ಮತ್ತು ಕಾಳಿದಾಸ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ರಘುಪತಿ ಭಟ್ ಅವರಿಂದ ಗೀತಾ ಚಿತ್ರಗಳ ಕುರಿತಾಗಿ ಸಂಗೀತದೊಂದಿಗೆ ಭಗವತ್ ಗೀತೆಯ 11ನೇ ಅಧ್ಯಾಯದಲ್ಲಿರುವ ವಿಶ್ವರೂಪ ದರ್ಶನವನ್ನು ಅನಾವರಣಗೊಳಿಸಿದರು.
ಶ್ರೀ ಸಾಯಿ ಶಿವ್ ಲಕ್ಷ್ಮಿಕೇಶವ ಮತ್ತು ತಂಡದವರಿಂದ ಕರ್ನಾಟಕ ಫ್ಯೂಷನ್ ವಾದ್ಯ ಸಂಗೀತವನ್ನು ಹಾಗೂ ಡಾ.ಮೈಸೂರು ಮಂಜುನಾಥ್ ಮತ್ತು ತಂಡದವರಿಂದ ವಯೋಲಿನ್ ಟ್ರಯೋ ಮಧುರವಾಗಿ ನುಡಿಸಿದರು.
ಇದಕ್ಕೂ ಮುನ್ನವೇ ಚಂದನ ಕಲಾತಂಡದಿಂದ ಸುಗಮ ಸಂಗೀತ, ಕಲಾಕ್ಷೀರ ಸಂಗೀತ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ವಾನ್ ಸಾಗರ್ ಸಿಂಗ್ ಮತ್ತು ತಂಡದಿಂದ ಭರತನಾಟ್ಯದ ನೃತ್ಯ ಎಲ್ಲರ ಮನಸೂರೆಗೊಂಡಿತು.