ಮೈಸೂರು: ಈ ಬಾರಿಯ ದಸರಾ ಪ್ರಯುಕ್ತ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ಎಂ.ಗೋಪಿನಾಥ್ ಶೆಣೈ ವಿಂಟೇಜಸ್ನಲ್ಲಿ ಸೆ.೨೬ರವರೆಗೆ ಹಮ್ಮಿಕೊಂಡಿರುವ ವಿಂಟೇಜ್ ಹಾಗೂ ಕ್ಲಾಸಿಕ್ ಕಾರುಗಳ ಪ್ರದರ್ಶನಕ್ಕೆ ಸೋಮವಾರ ಚಾಲನೆ ದೊರೆಯಿತು.
ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ೧೯೬೭ರ ಮರ್ಸಿಡಿಸ್ ಬೆಂಜ್ ೨೩೦ ಎಸ್ ಹಾಗೂ ೧೯೩೨ರ ಎಂಜಿ ಮಾರಿಸ್ ಕಾರಿನಲ್ಲಿ ಕುಳಿತು ಸುತ್ತು ಹಾಕುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅರುಣ್ ಯೋಗಿರಾಜ್ ಅವರು ಮೈಸೂರಿಗರು ಹಾಗೂ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ತಮ್ಮ ನೆಚ್ಚಿನ ಹಳೆ ಕಾರುಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಅಪರೂಪದ ಆಕರ್ಷಕ ಹಳೆ ಕಾರುಗಳನ್ನು ನೋಡಬಹುದಾಗಿದ್ದು, ಸಂಗ್ರಹ ಮಾಡಿರುವುದು ಅತ್ಯಂತ ಶ್ಲಾಘನೀಯ. ಇಂದಿಗೂ ಇಲ್ಲಿರುವ ಕಾರುಗಳ ನಿರ್ವಹಣೆ ಅಚ್ಚುಕಟ್ಟಾಗಿದ್ದು, ರೈಡ್ ಮಾಡಲು ರೆಡಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೈಗಾರಿಕೋದ್ಯಮಿ ಎಂ.ಗೋಪಿನಾಥ್ ಶೆಣೈ ಮಾತನಾಡಿ, ದಸರಾ ಅಂಗವಾಗಿ ಕಳೆದ ನಾಲ್ಕು ವರ್ಷಗಳಿಂದ ವಿಂಟೇಜ್ ಕಾರುಗಳ ರ್ಯಾಲಿ ನಡೆಸಲಾಗುತ್ತಿತ್ತು. ರ್ಯಾಲಿ ವೇಳೆ ಸಾಕಷ್ಟು ಜನರಿಗೆ ವಿಂಟೇಜ್ ಕಾರುಗಳನ್ನು ನೋಡುವ ಅವಕಾಶ ದೊರೆಯುತ್ತಿರಲಿಲ್ಲ. ಹಾಗಾಗಿ ಈ ವರ್ಷ ಐದು ದಿನಗಳ ಪ್ರದರ್ಶನವನ್ನು ಹಮ್ಮಿಕೊಂಡಿದ್ದೇವೆ. ೧೯೦೯ ರಿಂದ ೧೯೭೦ರವರೆಗಿನ ಸುಮಾರು ೫೦ಕ್ಕೂ ಹೆಚ್ಚು ಅಪರೂಪದ ವಿಂಟೇಜ್ ಕಾರುಗಳು ಹಾಗೂ ೪೦ಕ್ಕೂ ಹೆಚ್ಚು ಬೈಕ್ಗಳು ಇದ್ದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಗಿದೆ ಎಂದು ಹೇಳಿದರು.
ಈ ವೇಳೆ ಸಾವಿತ್ರಿ ಗೋಪಿನಾಥ್ ಶೆಣೈ, ಉದ್ಯಮಿ ಮಾದವ ಶೆಣೈ, ವಿಜಯ ಯೋಗಿರಾಜ್, ಬಿಜೆಪಿ ಮುಖಂಡ ಹೆಚ್.ಜಿ.ಗಿರಿಧರ್, ಸತ್ಯನಾರಾಯಣ ಭಟ್, ಶಿವಕುಮಾರ್, ಮಾಧವ ಪೈ, ಎನ್.ರವಿ, ಅನಿಲ್, ಬಿಜೆಪಿ ಮುಖಡರಾದ ಕೇಬಲ್ ಮಹೇಶ್, ಜೋಗಿ ಮಂಜು, ಸುರೇಶ್ ನಾಯಕ್ ಮತ್ತಿತರರು ಹಾಜರಿದ್ದರು.
