ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 10 ರಿಂದ 10.40 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆಯಿತು.
ನವವಧುವಿನಂತೆ ಶೃಂಗಾರಗೊಂಡಿದ್ದ ಚಾಮುಂಡಿ ಬೆಟ್ಟದ ಸಮೀಪದ ಬೃಹತ್ ವೇದಿಕೆಯಲ್ಲಿ ನಾಡಹಬ್ಬ 415ನೇ ದಸರಾ ಮಹೋತ್ಸವಕ್ಕೆ ಸಾಹಿತಿ, ಬೂಕರ್ ಪ್ರಶಸ್ತಿ ವಿಜೇತರಾದ ಭಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಉದ್ಘಾಟನಾ ಭಾಷಣ ಮಾಡಿದ ಬಾನು ಮುಷ್ತಾಕ್ ಅವರು,ದಸರಾ ಕೇವಲ ಹಬ್ಬವಲ್ಲ ಅದು ಶಾಂತಿಯ ಸಂಕೇತ, ಹೃದಯಗಳನ್ನು ಒಂದು ಮಾಡುವ ಸೌಹಾರ್ದತೆಯ ಸಾಂಸ್ಕೃತಿಕ ಹಬ್ಬವಾಗಿದೆ ಎಂದು ಹೇಳಿದರು.
ಸಂಸ್ಕೃತಿಯೇ ನಮ್ಮ ಬೇರು, ನೂರಾರು ದೀಪಗಳನ್ನು ಬೆಳಗಿಸಿದ್ದೇನೆ, ಮಂಗಳಾರತಿ ಸ್ವೀಕರಿಸಿದ್ದೇನೆ, ಪುಷ್ಪಾರ್ಚನೆ ಮಾಡಿದ್ದೇನೆ ಎಂದು ಹೇಳುವ ಮೂಲಕ ತಮ್ಮನ್ನು ವಿರೋಧಿಸಿದವರಿಗೆ ಅವರು ಟಾಂಗ್ ನೀಡಿದರು.
ಈ ನೆಲದ ಪರಂಪರೆ ಸರ್ವಜನಾಂಗದ ಶಾಂತಿಯ ತೋಟ ಅಂತ ಹೇಳುತ್ತದೆ,ಪ್ರತಿ ಹೂ ತನ್ನ ತೋಟದಲ್ಲಿ ಅರಳಲಿ, ಒಟ್ಟಿಗೆ ಸೇರಿದಾಗ ಎಲ್ಲರೂ ಒಂದಾಗಲಿ, ನಾವೆಲ್ಲರೂ ಒಂದೇ ಗಗನದ ಪಯಣಿಗರು, ಭೂಮಿ ಯಾರನ್ನು ಹೊರ ತಳ್ಳೋದಿಲ್ಲ, ಮನುಷ್ಯ ಮಾತ್ರ ಗಡಿ ಹಾಕುತ್ತಾನೆ, ಇದನ್ನು ನಾವೇ ಅಳಿಸಬೇಕು, ಅಕ್ಷರಗಳಿಂದ ನಾವು ಗೆಲ್ಲಬೇಕು ಎಂದು ವಿರೋಧ ಮಾಡಿದವರಿಗೆ ಭಾಷಣದ ಮೂಲಕ ಬಾನು ಮುಷ್ತಾಕ್ ಟಾಂಗ್ ಕೊಟ್ಟರು.
ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ನ್ಯಾಯದ ದೊರೆ ಆಗಿದ್ದರು. ಭೇದ ಭಾವ ತೋರಲಿಲ್ಲ. ಶಕ್ತಿಯನ್ನು ಹಂಚಿಕೊಂಡರೆ ಧೀರ್ಘ ಕಾಲ ಉಳಿಯುತ್ತೆ ಅಂತ ಹೇಳಿದ್ದಾರೆ ಎಂದು ಸ್ಮರಿಸಿದರು.
ನಾನು ಒಬ್ಬ ಸಾಹಿತಿ, ಲೇಖಕಿ. ಸಾಹಿತ್ಯದ ಮೂಲಕ ಸಂದೇಶ ಸಾರುತ್ತೇನೆ. 10 ವರ್ಷದ ಹಿಂದೆ ಬರೆದಿದ್ದ ಪ್ರಕಟಣೆ ಆಗಿದೆ, ಬಾಗಿನ ಅಂತ ಅದರ ಹೆಸರು. ಪ್ರೀತಿಯ ಸಮಾಜವ ಕಟ್ಟೋಣ ಎಲ್ಲರಿಗೂ ಸಮಪಾಲು ಸಮಬಾಳು ಇರಲಿ ಎಂದು ಬಾನು ಮುಷ್ತಾಕ್ ಹಾರೈಸಿದರು.
ನನ್ನ ಹಿಂದೂ ಧರ್ಮದ ಸಂಬಂಧ ನನ್ನ ಆತ್ಮಕಥೆಯಲ್ಲಿ ಬರೆದಿದ್ದೇನೆ. ಅದು ನಾಳೆ ಪ್ರಕಟ ಆಗತ್ತಿದೆ, ಎಷ್ಟೇ ಸವಾಲು ಬಂದರೂ ದಿಟ್ಟವಾಗಿ ನನ್ನನ್ನು ಆಹ್ವಾನ ನೀಡಿ ನೈತಿಕ ಬೆಂಬಲ ನೀಡಿದ ಮುಖ್ಯ ಮಂತ್ರಿಗಳು ಮತ್ತು ಜಿಲ್ಲಾಡಳಿತಕ್ಕೆ ನನ್ನ ಧನ್ಯವಾದಗಳು ಎಂದು ಬಾನು ಮುಸ್ತಾಕ್ ತಿಳಿಸಿದರು.
ಇದೇ ವೇಳೆ ಬಾನು ಮುಸ್ತಾಕ್ ಅವರು ರಚಿಸಿದ್ದ 10 ವರ್ಷ ಹಿಂದಿನ ಕವನ ಒಂದನ್ನು ವಾಚಿಸಿದರು.
ನನ್ನ ಸ್ನೇಹಿತೆ ಬೂಕರ್ ಪ್ರಶಸ್ತಿ ಸಂದರ್ಭದಲ್ಲಿ ನನ್ನನ್ನು ಚಾಮುಂಡಿ ಬೆಟ್ಟಕ್ಕೆ ಕರೆ ತರುತ್ತೇನೆ ಎಂದು ಹರಕೆ ಹೊತ್ತಿದ್ದಳು,ಆದರೆ ಬರಲಾ ಗಿರಲಿಲ್ಲ,ಆದರೆ ಈಗ ಚಾಮುಂಡೇಶ್ವರಿ ದೇವತೆಯೇ ನನ್ನನ್ನು ಆಕೆಯ ದರ್ಶನಕ್ಕೆ ಕರೆಸಿಕೊಂಡಿದ್ದಾಳೆ ಎಂದು ಭಾನು ಮಷ್ತಾಕ್ ಹೇಳಿದರು.
ಇಲ್ಲಿಗೆ ಬರಲು ನನಗೆ ಹಲವು ಅಡೆತಡೆಗಳು ಆಗಿತ್ತು ಆದರೆ ಅದೆಲ್ಲವನ್ನು ಕಳೆದು ದೇವಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ ಎಂದು ಪುನರುಚ್ಛರಿಸಿದರು.
ನನ್ನ ಮಾವ ಮೊಹಮ್ಮದ್ ಘೋಷ್ ಅವರು ಮೈಸೂರು ಅರಸರ ಅಂಗರಕ್ಷಕ ಪಡೆಯ ಸೈನಿಕರಾಗಿ ಸೇವೆ ಸಲ್ಲಿಸಿದ್ದಾರೆ, ಮಹಾರಾಜರು ಒಬ್ಬ ಮುಸ್ಲಿಮನನ್ನು ನಂಬಿ ಆತನನ್ನು ತಮ್ಮ ರಕ್ಷಣಾ ಪಡೆಯಲ್ಲಿ ಇಟ್ಟುಕೊಂಡಿದ್ದು ವಿಶೇಷವಾಗಿತ್ತು ಎಂದು ಅವರು ಸ್ಮರಿಸಿದರು.
ದಸರಾ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ, ಸಚಿವರುಗಳಾದ ಹೆಚ್.ಸಿ. ಮಹದೇವಪ್ಪ, ಶಿವರಾಜ್ ತಂಗಡಗಿ,ಹೆಚ್.ಕೆ ಪಾಟೀಲ್,ಕೆ.ಹೆಚ್. ಮುನಿಯಪ್ಪ,ಕೆ. ವೆಂಕಟೇಶ್, ಶಾಸಕರುಗಳಾದ ಜಿ ಟಿ ದೇವೇಗೌಡ,ಟಿ.ಎಸ್. ಶ್ರೀವತ್ಸ, ತನ್ವೀರ್ ಸೇಟ್, ಶಿವಕುಮಾರ್, ಹರೀಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.