ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು,ದೀಪಾಲಂಕಾರ ಎಲ್ಲರ ಮನಸೂರೆಗೊಳ್ಳುತ್ತಿದೆ.
ನಗರದ ಎಲ್‌ಐಸಿ ವೃತ್ತ, ರಾಮಸ್ವಾಮಿ ವೃತ್ತ, ಕೆ.ಆರ್.ವೃತ್ತ, ಚಾಮರಾಜ ಒಡೆಯರ್ ವೃತ್ತ, ದೊಡ್ಡಕೆರೆ ಮೈದಾನ, ಜಯಚಾಮರಾಜ ವೃತ್ತ, ಗನ್ ಹೌಸ್ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ.
ಈ ಬಾರಿ 136 ಕಿ. ಮೀ. ಉದ್ದದ ದೀಪಾಲಂಕಾರ,116 ವೃತ್ತಗಳಲ್ಲಿ ಕಣ್ಮನ ಸೆಳೆಯುವ ಮೂವ್‌ಮೆಂಟ್ ದೀಪಗಳನ್ನು ಅಳವಡಿಸಲಾಗಿದೆ.
ಕುಪ್ಪಣ್ಣ ಪಾರ್ಕ್‌ನಲ್ಲಿ ತೋಟಗಾರಿಕೆ ಇಲಾಖೆಯಿಂದ ನಡೆಯಲಿರುವ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಹೂವಿನ ಕುಂಡಗಳಲ್ಲಿ ಬಗೆ ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ.

ಈ ಬಾರಿ 35 ರಿಂದ 40ಕ್ಕೂ ಹೆಚ್ಚು ತಳಿಯ ವಿವಿಧ ಬಣ್ಣಗಳ ಹೂವಿನ ಹಾಗೂ ಅಲಂಕಾರಿಕ ಗಿಡಗಳು ನೋಡುಗರ ಮನಸೂರೆಗೊಳ್ಳಲಿವೆ.
ಉತ್ತನಹಳ್ಳಿಯಲ್ಲಿ ಯುವ ದಸರಾ ಯುವ ದಸರಾವನ್ನು ಈ ಬಾರಿಯೂ ಉತ್ತನಹಳ್ಳಿ ಸಮೀಪ ಆಯೋಜಿಸುತ್ತಿದ್ದು, ಅರ್ಜುನ್ ಜನ್ಯ, ಸ್ಯಾಂಡಲ್‌ವುಡ್ ಖ್ಯಾತ ಸಂಗೀತ ದಿಗ್ಗಜರ ರಸಸಂಜೆ ಕಾರ್ಯಕ್ರಮ ನಿಗದಿಯಾಗಿರುವುದರಿಂದ ಯುವಕರು ಕಾತುರದಿಂದ ಕಾಯುತ್ತಿದ್ದಾರೆ.
ಕುಸ್ತಿ ಪಂದ್ಯಾವಳಿಯಲ್ಲಿ ಸೆಣೆಸಲು ಪೈಲ್ವಾನರು ತಯಾರಿ ಮಾಡಿಕೊಂಡಿದ್ದಾರೆ.
948.65 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಮೈಸೂರು ದಸರಾ ಮಹೋತ್ಸವದ ನಿಮಿತ್ತ ಮೈಸೂರು ಮಹಾನಗರಪಾಲಿಕೆ ವತಿಯಿಂದ ಒಟ್ಟು 948.65 ಲಕ್ಷ ರೂ. ವೆಚ್ಚದಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ದಸರಾ ಜಂಬೂಸವಾರಿ ಸಾಗುವ ಮಾರ್ಗ, ಅರಮನೆ ಸುತ್ತ ಹಾಗೂ ಇತರ ಕಡೆಗಳಲ್ಲಿ 114.66 ಲಕ್ಷ ರೂ. ವೆಚ್ಚದಲ್ಲಿ ಬ್ಯಾರಿಕೇಡಿಂಗ್ ಕಾಮಗಾರಿ, 588.70 ಲಕ್ಷ ರೂ. ವೆಚ್ಚದಲ್ಲಿ ದಸರಾ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಪಾದಚಾರಿ ಮಾರ್ಗದ ದುರಸ್ತಿ, ನಗರದ ಪ್ರಮುಖ ರಸ್ತೆಗಳಲ್ಲಿ ಲೇನ್, ಕರ್ಬ್ ಪೇಂಟಿಂಗ್ ಕಾಮಗಾರಿ, ರಸ್ತೆ ದುರಸ್ತಿ ಕಾಮಗಾರಿ, 14.75 ಲಕ್ಷ ರೂ. ವೆಚ್ಚದಲ್ಲಿ ಒಡೆಯರ್ ಪ್ರತಿಮೆಗಳು, ಅಂಬೇಡ್ಕರ್ ಪ್ರತಿಮೆಗಳು, ವೃತ್ತಗಳಲ್ಲಿ ಗೋಪುರಗಳಿಗೆ ಬಣ್ಣ ಬಳಿಯುವುದು 90 ಲಕ್ಷ ರೂ. ವೆಚ್ಚದಲ್ಲಿ ದಸರಾ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಸ್ವಚ್ಛತಾ ಕಾಮಗಾರಿ, ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್ ಟಾಯ್ಲೆಟ್ ನಿರ್ಮಾಣ ಮಾಡುವುದು. 88.04 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಕಾಮಗಾರಿ, 20 ಕ್ಕೂ ಮೇಲ್ಪಟ್ಟ ಉದ್ಯಾನವನಗಳಲ್ಲಿ ದೀಪಾಲಂಕಾರದ ವ್ಯವಸ್ಥೆ ಮಾಡುವುದು.15 ಲಕ್ಷ ರೂ. ವೆಚ್ಚದಲ್ಲಿ ಶ್ವಾನ ಪ್ರದರ್ಶನ, 12.50 ಲಕ್ಷ ರೂ. ವೆಚ್ಚದಲ್ಲಿ ಯುವಸಂಭ್ರಮ ಹಾಗೂ 25 ಲಕ್ಷ ರೂ.ಗಳನ್ನು ತ್ಯಾಜ್ಯ ವಸ್ತುಗಳಿಂದ ಕಲಾಕೃತಿಗಳ ನಿರ್ಮಾಣ ಹಾಗೂ ಇತರೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು
ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ದಸರಾ ಮಹೋತ್ಸವಕ್ಕೆ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಆನ್ಲೈನ್ನಲ್ಲಿ ಗೋಲ್ಡ್ ಕಾರ್ಡ್, ಟಿಕೆಟ್‌ಗಳ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ.
ಯುವ ಸಂಭ್ರಮ’ವನ್ನು ನಿತ್ಯ 50 ಸಾವಿರ ಜನರು ವೀಕ್ಷಿಸಿದ್ದಾರೆ.
ದಸರಾ ಮಹೋತ್ಸವದ ಸಂಬಂಧ ನಗರದ ರಸ್ತೆಗಳ ಗುಂಡಿ ದುರಸ್ತಿಪಡಿಸಲಾಗಿದೆ. ರಾಜ ಮಾರ್ಗದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗಿದೆ. ಫುಟ್ ಪಾತ್ನಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ನವರಾತ್ರಿ ವೇಳೆ ಸ್ವಚ್ಛತಾ ಕಾರ್ಯಕ್ಕಾಗಿ ಹೆಚ್ಚುವರಿ ಪೌರಕಾರ್ಮಿಕರು, ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ ಎಂದು
ನಗರಪಾಲಿಕೆ ಆಯುಕ್ತರಾದ ಶೇಖ್ ತನ್ವೀರ್ ಆಸಿಫ್ ತಿಳಿಸಿದ್ದಾರೆ.