ಬೆಂಗಳೂರು: ಜಾತಿಗಣತಿ ವೇಳೆ ಉಪಜಾತಿಗಳ ಮೊದಲು ಒಕ್ಕಲಿಗ ಎಂದು ಬರೆಸಬೇಕೆಂದು ಒಕ್ಕಲಿಗ ಸಮುದಾಯದ ಸಭೆಯಲ್ಲಿ ಒಕ್ಕೊರಲ ಕೂಗು ಕೇಳಿಬಂದಿದೆ.
ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಒಕ್ಕಲಿಗ ಸಮುದಾಯದ ಜಾತಿಗಣತಿ ಜಾಗೃತಿ ಸಭೆಯಲ್ಲಿ ಈ ಕೂಗು ಕೇಳಿಬಂದಿದೆ.
ಸಭೆಯಲ್ಲಿ ನಂಜಾವಧೂತ ಸ್ವಾಮೀಜಿ, ಹೆಚ್.ಡಿ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್, ಡಿ.ವಿ ಸದಾನಂದಗೌಡ, ಆರ್. ಅಶೋಕ್, ಚಲುವರಾಯಸ್ವಾಮಿ, ಅಶ್ವಥ್ ನಾರಾಯಣ್, ನಿಖಿಲ್ ಕುಮಾರಸ್ವಾಮಿ, ಎಂ.ಸಿ.ಸುಧಾಕರ್, ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ವಿವಿಧ ಮಠಾಧೀಶರು ಭಾಗಿಯಾಗಿದ್ದಾರೆ.
ಅಲ್ಲದೇ ಒಕ್ಕಲಿಗ ಜನಾಂಗದ ಶಾಸಕರು, ಸಂಸದರು,ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಪಕ್ಷಾತೀತವಾಗಿ ಪಾಲ್ಗೊಂಡಿದ್ದಾರೆ.
ಜಾತಿ ಸಮೀಕ್ಷೆಯಲ್ಲಿ ಏನೆಂದು ನಮೂದಿಸಬೇಕು,ಒಕ್ಕಲಿಗ ಸಮುದಾಯಲ್ಲಿ ಉಪಜಾತಿಗಳಿವೆ,ಜಾತಿ ಕಲಂನಲ್ಲಿ ಏನೆಂದು ನಮೂದು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಇನ್ನು ಸಭೆಗೂ ಮುನ್ನ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರು ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಶ್ರೀಗಳ ಜೊತೆಯಲ್ಲೇ ಇಬ್ಬರೂ ವೇದಿಕೆಗೆ ಆಗಮಿಸಿದ್ದು,ಸ್ವಾಮೀಜಿ ಅಕ್ಕಪಕ್ಕದಲ್ಲಿ ಕುಳಿತದ್ದು ವಿಶೇಷವಾಗಿತ್ತು,ಆದರೆ ಡಿಕೆಶಿ ಹಾಗೂ ಹೆಚ್‌ಡಿಕೆ ಒಬ್ಬರನ್ನೊಬ್ಬರು ಮಾತನಾಡಿಸದೆ ಕುಳಿತದ್ದು ಎಲ್ಲರ ಗಮನ ಸೆಳೆಯಿತು.