ಮೈಸೂರು: ಉದ್ಬೂರ್ ಗೆಟ್ ಬಳಿ ಇರುವ ಡಾ.ವಿಷ್ಣುವರ್ಧನ್ ಸ್ಮಾರಕದಲ್ಲಿ
ವಿಷ್ಣುವರ್ಧನ್ ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ನೆಚ್ಚಿನ ನಟ ವಿಷ್ಣುವರ್ಧನ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ರಕ್ತದಾನ ಶಿಬಿರವು ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ನಡೆಯಿತು.
ಶಿಬಿರಕ್ಕೂ ಮೊದಲು ಬೆಳಿಗ್ಗೆ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುಧ್ ಮತ್ತು ವಿಷ್ಣು ಪುತ್ರಿ ವಿಷ್ಣುವರ್ಧನ್ ಅವರ ಪ್ರತಿಮೆಗೆ ಪೂಜೆ ಸಲ್ಲಿಸಿದರು.

ಸಾಹಸಸಿಂಹ, ಕರ್ನಾಟಕ ರತ್ನ ಡಾಕ್ಟರ್ ವಿಷ್ಣುವರ್ಧನ್ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ 75ಕ್ಕೂ ಹೆಚ್ಚು ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಡಾಕ್ಟರ್ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು ಮಾತನಾಡಿ, ಅಪ್ಪಾಜಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಬಂದಿರುವುದು ಅಭಿಮಾನಿಗಳ ಆಶೀರ್ವಾದದಿಂದ, ಪ್ರತಿ ವರ್ಷ ಅವರ ಜನ್ಮದಿನವನ್ನು ಸಾಹಸಸಿಂಹ ವಿಷ್ಣುವರ್ಧನ್ ರವರ ಅಭಿಮಾನಿಗಳು ಅರ್ಥಪೂರ್ಣವಾಗಿ ವಿಶೇಷವಾಗಿ ಆಚರಿಸ್ತಾ ಬಂದಿದ್ದಾರೆ,ಅದಕ್ಕಾಗಿ ನಮ್ಮ ಕುಟುಂಬದ ವತಿಯಿಂದ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ಇಂದು 5,000 ಜನರಿಗೆ ಹೋಳಿಗೆ ಊಟ, ಹಾಗೂ ಅಭಿಮಾನಿಗಳಿಂದ ಸ್ವಯಂ ಪ್ರೇರಿತ ರಕ್ತದಾನ ಮತ್ತು ರಸಮಂಜರಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ಉಂಟುಮಾಡುತ್ತಿದೆ ಎಂದು ಖುಷಿಯಿಂದ ತಿಳಿಸಿದರು.
ರಕ್ತಕ್ಕೆ ಜಾತಿ, ಧರ್ಮದ ಭೇದವಿಲ್ಲ, ಅಪಘಾತ ಸಹಿತ ತುರ್ತು ಅವಘಡದಲ್ಲಿ ಸಿಲುಕಿದವರಿಗೆ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ, ದಾನಿಗಳ ಮೂಲಕವೇ ಅವಶ್ಯ ವಿದ್ದವರಿಗೆ ಪೂರೈಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಅರ್ಹ ದಾನಿಗಳು ರಕ್ತದಾನ ಮಾಡು ವುದರ ಮೂಲಕ ಇತರರ ಜೀವ ಉಳಿಸಲು ಸಹಕರಿಸಬೇಕೆಂದು ಕೋರಿದರು.
ಜೀವ ರಕ್ಷಣೆ ಕಾರಣವಾಗುವ ಮಹತ್ವದ ಕಾರ್ಯದಲ್ಲಿ ಭಾಗಿಯಾಗುವ ಕೆಲಸವನ್ನು ಯುವಜನತೆ ಮಾಡಬೇಕು, ಪ್ರಸ್ತುತ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಒಳ್ಳೆಯತನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಅನಿರುಧ್ ಸಲಹೆ ನೀಡಿದರು
ಇದೇ ವೇಳೆ ಬೆಂಗಳೂರಿನ ಕಲಾವಿದ ವಿಜಯ್ ಅವರು ಅಭಿಮಾನಿಗಳ
ಕೆನ್ನೆಗೆ ಹಾಗೂ ಕೈಗೆ ಕರ್ನಾಟಕ ರತ್ನ ವಿಷ್ಣು, ಹಾಗೂ ಅವರು ನಟಿಸಿದ ಚಿತ್ರಗಳ ಹೆಸರಿನ ಟ್ಯಾಟೋಗಳನ್ನು ಉಚಿತವಾಗಿ ಹಾಕುವ ಮೂಲಕ ಅಭಿಮಾನ ಮೆರೆದರು.
ವಿಷ್ಣುವರ್ಧನ್ ಮೊಮ್ಮಗ ಶ್ರೇಷ್ಠವರ್ಧನ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ ಪಾರ್ಥಸಾರಥಿ, ಜಿ ರಾಘವೇಂದ್ರ, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್ ರಾಜೇಶ್,
ರೇಖಾ ಶ್ರೀನಿವಾಸ್, ಇನ್ನರ್ ವ್ಹೀಲ್ ಕ್ಲಬ್ ನ ಸಂಧ್ಯಾ, ಟಿ ಎಸ್ ಅರುಣ್, ಜ್ಯೋತಿ, ಮತ್ತಿತರರು ಹಾಜರಿದ್ದರು.