ಪಾಳ್ಯ – ಚಿಕ್ಕಲ್ಲೂರು ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಮಂಜುನಾಥ್

Spread the love

(ವರದಿ:ಸಿದ್ದರಾಜು,,ಕೊಳ್ಳೇಗಾಲ)

ಕೊಳ್ಳೇಗಾಲ: ಪಾಳ್ಯ – ಚಿಕ್ಕಲ್ಲೂರು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರು ಪರಿಶೀಲಿಸಿದರು.

ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅಭಿವೃದ್ಧಿ ಕಾಣದೆ ಹದಗೆಟ್ಟಿದ್ದ ಬಂಡಳ್ಳಿ – ಹನೂರು ರಸ್ತೆ, ಮೋಡಹಳ್ಳಿ – ದೊಡ್ಡಿಂದುವಾಡಿ ಹಾಗೂ ಚಿಕ್ಕಲ್ಲೂರು ರಸ್ತೆಗಳು ಸೇರಿದಂತೆ 6 ಕಡೆ ರಸ್ತೆಗಳ ಅಭಿವೃದ್ಧಿಗೆ ಶಾಸಕರು ಮೇ 19 ರಂದು ಗುದ್ದಲಿ ಪೂಜೆ ನೆರವೇರಿಸಿದ್ದರು.

ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಶಾಸರು ಕಾಮಗಾರಿಯ ವೈಖರಿಯನ್ನು ಕಂಡು ಸಿಡಿಮಿಡಿಗೊಂಡರು. ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆಯ ನೆಲಹಾಸಿಗೆ ಗುಣಮಟ್ಟದ ಮಣ್ಣು ಬಳಸದೆ ಕಳಪೆ ಮಣ್ಣು ಬಳಸುತ್ತಿದ್ದ ಕಾರಣ ಗುತ್ತಿಗೆದಾರರ ವಿರುದ್ಧ ಹರಿಹಾಯ್ದರು. ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯನ್ನು ಕಂಡು ಸ್ಥಳದಲ್ಲೆ ಅವರ ಮೊಬೈಲ್ ಗೆ ಕರೆಮಾಡಿ ತರಾಟೆಗೆ ತೆಗೆದುಕೊಂಡರು.

ಕೂಡಲೇ ಕಳಪೆ ಮಣ್ಣು ತೆಗೆದು ಗುಣಮಟ್ಟದ ಮಣ್ಣು ಹಾಕಿಸುವಂತೆ ತಾಕೀತು ಮಾಡಿದರು.

ನಂತರ ಶಾಸಕರು ಅಲ್ಲಲ್ಲಿ ರಸ್ತೆ ನಡುವೆ ನಿರ್ಮಿಸಿರುವ ಕಿರು ಸೇತುವೆಗಳ ಗುಣಮಟ್ಟ ನೋಡಿ ಬೇಸರ ವ್ಯಕ್ತಪಡಿಸಿದರು.

ಈ ನಡುವೆ ಪ್ರಕಾಶ್ ಪಾಳ್ಯ ಹಾಗೂ ಕೊತ್ತನೂರು ಗ್ರಾಮಗಳಲ್ಲಿ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಅಂಗಡಿ ಮುಂಗಟ್ಟುಗಳು ಹಾಗೂ ಮನೆಗಳವರಿಗೆ ರಸ್ತೆ ಅಭಿವೃದ್ಧಿಗೆ ಸಹಕರಿಸಿ ಎಂದು ಮಂಜುನಾಥ್ ಮನವಿ ಮಾಡಿದರು.

ಈ ವೇಳೆ ಪ್ರಕಾಶ್ ಪಾಳ್ಯದಲ್ಲಿ ಕುಟುಂಬವೊಂದು ರಸ್ತೆ ಮಾಡುವಾಗ ಅಂಗಡಿ ಮುಂಭಾಗ ಹೋಗುತ್ತದೆ ಉಳಿಸಿ ಕೊಡಿ ಎಂದು ಮನವಿ ಮಾಡಿದರು.

ಈಗ 50 ಅಡಿ ರಸ್ತೆ ಮಾಡಲಾಗುತ್ತದೆ. ಮುಂದೆ ಇನ್ನೂ ರಸ್ತೆ ಅಗಲವಾಗಲಿದ್ದು ದ್ವಿಪಥ ರಸ್ತೆ ನಿರ್ಮಾಣ ಮಾಡಿಸುವ ಯೋಜನೆ ಇದೆ ಆಗ ಇನ್ನೂ ರಸ್ತೆ ಅಗಲವಾಗಲಿದೆ. ಸದ್ಯಕ್ಕೆ ಈಗ ರಸ್ತೆ ಮಾಡಲು ಅನುವು ಮಾಡಿಕೊಡಿ ಎಂದು ಶಾಸಕರು ತಿಳಿಹೇಳಿದರು.

ಕೊತ್ತನೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ವೇಳೆ ತೆರವುಗೊಳಿಸುವ ಮನೆಗಳಿಗೆ ಪರಿಹಾರ ಯಾವಾಗ ಬರುತ್ತದೇ ಎಂದು ಗ್ರಾಮಸ್ಥರು ಕೇಳಿದಾಗ ಲೋಕೋಪಯೋಗಿ ಇಲಾಖೆಯ ರಸ್ತೆಯನ್ನು ಅಕ್ರಮಿಸಿಕೊಂಡು ಮನೆ ನಿರ್ಮಾಣ ಮಾಡಿರುವುದರಿಂದ ರಸ್ತೆಯ ನಕ್ಷೆಯಂತೆ ರಸ್ತೆ ಅಭಿವೃದ್ಧಿ ಮಾಡಲಾಗುವುದು ಇದಕ್ಕೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ ರಸ್ತೆ ಅಭಿವೃದ್ಧಿ ಮಾಡಲು ಸಹಕರಿಸಿ, ಇಲ್ಲ ಗ್ರಾಮದ (ಬೈಪಾಸ್) ಹೊರವಲಯದಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡು ಹೋಗುತ್ತೇವೆ ಎಂದಾಗ ಗ್ರಾಮದ ಹೊರವಲಯದಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡು ಹೋದರೆ ಗ್ರಾಮಕ್ಕೆ ಮೌಲ್ಯ ಕಡಿಮೆ ಯಾಗುತ್ತದೆ ಆದ್ದರಿಂದ ಗ್ರಾಮದೊಳಗೆ ರಸ್ತೆ ಅಭಿವೃದ್ಧಿ ಪಡಿಸಿ ಸಹಕರಿಸುವುದಾಗಿ ಜನರು ತಿಳಿಸಿದರು.

ಈ ಸಂದರ್ಭದಲ್ಲಿ ಸುದ್ದಿ ಗಾರರೊಡನೆ ಮಾತನಾಡಿದ ಶಾಸಕ ಮಂಜುನಾಥ್, ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಪ್ಯಾಕೇಜ್ 67 ಕೋಟಿ ರೂ.ಗಳ ಅನುಧಾನದಡಿ ಕ್ಷೇತ್ರದ ರಸ್ತೆಗಳ ಸಾಗುವ ಭಾಗಗಳಲ್ಲಿ ಅಭಿವೃದ್ದಿ ಕೈಗೊಂಡಿದ್ದು,ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

25 ಕೋಟಿ ರೂ. ವೆಚ್ಚದಲ್ಲಿ ದೊಡ್ಡಿಂದುವಾಡಿ ಗ್ರಾಮದಲ್ಲಿ ಮೋಡಹಳ್ಳಿ ವೃತ್ತದಿಂದ ದೊಡ್ಡಿಂದುವಾಡಿ ವೃತ್ತದವರೆಗೆ ದೊಡ್ಡಿಂದುವಾಡಿ – ಕನಕಗಿರಿ ರಸ್ತೆ, ಕೊತ್ತನೂರು ಗ್ರಾಮದಲ್ಲಿ ಮೊಳಗನಕಟ್ಟೆಯಿಂದ ಕೊತ್ತನೂರು ಗ್ರಾಮದ ಅಂಬೇಡ್ಕರ್ ಪ್ರತಿಮೆವರೆಗಿನ ಚಿಕ್ಕಲ್ಲೂರು ರಸ್ತೆ ಭಾಗಗಳಲ್ಲಿ 9 ಕಿ.ಮೀ. ರಸ್ತೆ, 24,.80 ಕೋಟಿ ರೂ. ವೆಚ್ಚದಲ್ಲಿ ಬಂಡಳ್ಳಿಯಲ್ಲಿ ಬಂಡಳ್ಳಿ ರಸ್ತೆ, ಹಾಗೂ ಜಿ.ವಿ.ಗೌಡ ಕಾಲೇಜು ಬಳಿ ಬಂಡಳ್ಳಿ – ಹನೂರು ರಸ್ತೆ, ಭಾಗಗಳಲ್ಲಿ 10.470  ಕಿ.ಮೀ. ರಸ್ತೆ, ಹಾಗೆಯೇ 17 ಕೋಟಿ ರೂ. ವೆಚ್ಚದಲ್ಲಿ ಹನೂರಿನ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಹನೂರು, ರಾಮಾಪುರ- ಕೌದಳ್ಳಿ ಹಾಯ್ದ ಭಾಗಗಳಲ್ಲಿ ರಸ್ತೆ ಆಭಿವೃಧ್ಧಿ, ಹಾಗೂ ಕೌದಳ್ಳಿ – ರಾಮಾಪುರ ಮುಖ್ಯ ರಸ್ತೆ ಬಳಿ ಕೌದಳ್ಳಿ ಚರ್ಚ್ ರಸ್ತೆ ಸೇರಿದಂತೆ 67 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 30 ಕಿ.ಮೀ. ರಸ್ತೆಗಳ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪಾಳ್ಯ – ಚಿಕ್ಕಲ್ಲೂರು ರಸ್ತೆಯನ್ನು 60 ಅಡಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ರಸ್ತೆಯ ಮಧ್ಯದಿಂದ ಎರಡು ಕಡೆ 30 ಅಡಿ 30 ಅಡಿ ತೆಗೆದುಕೊಂಡು ಅಭಿವೃದ್ಧಿ ಪಡಿಸಲಾಗುತ್ತಿದೆ. ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರು ಹಾಗೂ ಇಂಜಿನಿಯರ್ ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ವಿಜಯ್ ಕುಮಾರ್. ಮಹಾದೇವ ಗೋವಿಂದ, ಚಿನ್ನವೆಂಕಟ್, ಕೃಷ್ಣ, ಚಿನ್ನಸ್ವಾಮಿ, ಶಿವು, ಅತಿಕ್, ಮಹೇಶ್, ನಟರಾಜು ಗೌಡ ಹಾಗೂ ಗುತ್ತಿಗೆ ಸಂಸ್ಥೆ ಯ ಅಭಿಯಂತರ ವಿವೇಕ್, ಸೂಪರ್ ವೈಸರ್ ಕುಮಾರ್ ಮತ್ತುತರರು ಹಾಜರಿದ್ದರು.