ವಿಷ್ಣುವರ್ಧನ ಅವರಿಗೆ ಕರ್ನಾಟಕ ರತ್ನ: ಅಭಿಮಾನಿಗಳಿಂದ ರಕ್ತದಾನ

Spread the love

ಮೈಸೂರು: ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ವಿಷ್ಣು ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮಾಡಲಾಯಿತು.

ಉದ್ಬೂರ್ ಗೇಟ್ ನಲ್ಲಿರುವ ಡಾಕ್ಟರ್ ವಿಷ್ಣುವರ್ಧನ್ ಸ್ಮಾರಕದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ರಾಜ್ಯ ಸರ್ಕಾರ
ನೀಡಿರುವ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಹಿನ್ನೆಲೆಯಲ್ಲಿ ಮಹಿಳಾ ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಸ್ವಾಗತಿಸಿ,ನಂತರ ಸಿಹಿ ಹಂಚಿ ಸಂಭ್ರಮಿಸಿದರು

ಈ ವೇಳೆ ಮಾತನಾಡಿದ ನಗರ ಪಾಲಿಕೆ ಮಸಜಿ ಸದಸ್ಯ ಮಾ ವಿ ರಾಮ್ ಪ್ರಸಾದ್,
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಹಾಗೂ ಬಹುಭಾಷಾ ತಾರೆ ಪದ್ಮಶ್ರೀ ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಕಟವಾಗಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

ಇಬ್ಬರೂ ಮಹಾನ್ ಕಲಾವಿದರ ಅಪಾರ ಅಭಿಮಾನಿಗಳ ಬಹು ದಿನಗಳ ನಿರೀಕ್ಷೆ ಸಾಕಾರಗೊಂಡಂತಾಗಿದೆ. ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತ ಗೊಳಿಸಲು ಕಲಾ ಸೇವೆಗೈದ ಈ ಇಬ್ಬರೂ ಶ್ರೇಷ್ಠ ವ್ಯಕ್ತಿತ್ವಗಳಿಗೆ ಮರಣೋತ್ತರವಾಗಿ ಪ್ರಶಸ್ತಿ ಲಭಿಸಿರುವುದು ಕನ್ನಡ ಚಿತ್ರರಂಗದ ಬೆಳವಣಿಗೆಗೂ ಪ್ರೇರಣೆ ನೀಡಿದಂತಾಗಿದೆ ಎಂದು ಹೇಳಿದರು.

ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ ಮಾತನಾಡಿ,ಡಾಕ್ಟರ್ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಸರ್ಕಾರ ವಿಧಾನಸೌಧ ಮುಂಭಾಗ ಅಥವಾ ಅರಮನೆ ಮೈದಾನದಲ್ಲಿ ವಿಜೃಂಭಣೆಯಿಂದ ನೆರವೇರಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕಡಕೋಳ ಜಗದೀಶ್, ಎಸ್ ಎನ್ ರಾಜೇಶ್, ರವಿಚಂದ್ರ, ಅಕ್ಬರ್, ರೇಖಾ ಶ್ರೀನಿವಾಸ್, ಕಾವ್ಯ, ಪವಿತ್ರ,ಶ್ರುತಿ, ಮಾಲಿನಿ ಮಲ್ಲೇಶ್, ಜಯಶ್ರೀ ಶಿವರಾಮ್ ಮತ್ತಿತರರು ಹಾಜರಿದ್ದರು.