ಜಾತಿ ಸಮೀಕ್ಷೆಯಲ್ಲಿ ಎಲ್ಲಾ ಬ್ರಾಹ್ಮಣರನ್ನು ಒಂದೆಂದು ಪರಿಗಣಿಸಿ-ಸಚ್ಚಿದಾನಂದಮೂರ್ತಿ

ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದಿಂದ ಕೈಗೊಳ್ಳಲಾಗುತ್ತಿರುವ ಜಾತಿ ಸಮೀಕ್ಷೆಯಲ್ಲಿ ಬ್ರಾಹ್ಮಣರೆಲ್ಲರನ್ನೂ ಒಂದೇ ಜಾತಿಯೆಂದು ಪರಿಗಣಿಸಬೇಕೆಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಪರಿಷತ್‌‌ ಅಧ್ಯಕ್ಷ ಹೆಚ್.ಎಸ್.
ಸಚ್ಚಿದಾನಂದಮೂರ್ತಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಬ್ರಾಹ್ಮಣರನ್ನು 45 ಕ್ಕೂ ಹೆಚ್ಚು ಉಪಜಾತಿಗಳನ್ನಾಗಿ ವರ್ಗೀಕರಿಸಿ ದತ್ತಾಂಶ ಸಂಗ್ರಹಣೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.ಆದರೆ ಇದು ಸರಿಯಲ್ಲ ಎಂದು ಹೇಳಿದರು.

ಶ್ರೀಗಾಯತ್ರಿ ಮಂತ್ರದ ಸೂತ್ರದಡಿ ಬರುವ ಎಲ್ಲ ಬ್ರಾಹ್ಮಣರನ್ನು ‘ಬ್ರಾಹ್ಮಣ’ ಎಂದು ಮಾತ್ರ ವರ್ಗೀಕರಿಸಬೇಕು. ಅದರಲ್ಲಿ ಮುಸ್ಲಿಮ್ ಬ್ರಾಹ್ಮಣ, ಕ್ರಿಶ್ಚಿಯನ್ ಬ್ರಾಹ್ಮಣ ಮುಂತಾದವರನ್ನು ಸೇರಿಸಬಾರದು ಎಂದು ಆಗ್ರಹಿಸಿದರು.

ಸಮೀಕ್ಷೆಯಲ್ಲಿ ಬ್ರಾಹ್ಮಣರಲ್ಲಿಯ ಉಪಜಾತಿಗಳನ್ನು ಬೇರೆ ಬೇರೆಯೆಂದು ಪರಿಗಣಿಸಿ, ಅವುಗಳನ್ನು ವಿಭಾಗಿಸದೆ, ಪ್ರತಿಯೊಂದು ಉಪಜಾತಿಗೆ ಪ್ರತ್ಯೇಕ ಗಣಕಚಿಹ್ನೆ ನೀಡದೆ, ಸಮಗ್ರ ಬ್ರಾಹ್ಮಣ ಜಾತಿಯನ್ನು ಒಂದೇ ಎಂದು ಪರಿಗಣಿಸಿ, ಎಲ್ಲಾ ಉಪಜಾತಿಗಳಿಗೆ ಒಂದೇ ಗಣ ಗಣಕಚಿಹ್ನೆ ನೀಡಬೇಕೆಂದು ಅವರು ಕೋರಿದರು.

ಬ್ರಾಹ್ಮಣ ಜಾತಿಯ ಸಮಗ್ರತೆಯ ಕುರಿತು ಆಯೋಗದ ಅಂದಿನ ಅಧ್ಯಕ್ಷರಾದ ಜಯಪ್ರಕಾಶ ಹೆಗಡೆಯವರನ್ನು ಹಲವು ಬಾರಿ ಭೇಟಿಮಾಡಿ ಮನವಿ ನೀಡಿ ಚರ್ಚಿಸಲಾಗಿತ್ತು. ಆದರೂ, ಸರ್ಕಾರದ ಈ ಬಾರಿಯ ಉದ್ದೇಶಿತ ಸಮೀಕ್ಷೆಯಲ್ಲಿ ನಮ್ಮ ಮನವಿಯನ್ನು ಪರಿಗಣಿಸದೆ, ಒಂದು ಜಾತಿಯ ಪ್ರತಿಯೊಂದು ಉಪಜಾತಿಗೆ ಪ್ರತ್ಯೇಕವಾದ ಗಣಕ ಚಿಹ್ನೆ ನೀಡುತ್ತಿರುವುದು ಸರಿಯಲ್ಲ,ಕೂಡಲೇ‌ ಇದನ್ನು ಕೈಬಿಡಬೇಕು. ಮತ್ತು ಎಲ್ಲಾ ಉಪಜಾತಿಗಳನ್ನು ಒಳಗೊಂಡ ಸಮಗ್ರ ಬ್ರಾಹ್ಮಣ ಜಾತಿಗೆ, ಒಂದೇ ಗಣಕ ಚಿಹ್ನೆ ನೀಡಬೇಕೆಂದು ಮನವಿ ಮಾಡಿದರು.

ರಾಜ್ಯದ ಒಟ್ಟೂ ಜನಸಂಖ್ಯೆಯಲ್ಲಿ ಬ್ರಾಹ್ಮಣರ ಜನಸಂಖ್ಯೆಯ ಪಾಲು ಎಷ್ಟು ಎನ್ನುವುದು ಹೆಚ್ಚು ಸ್ಪಷ್ಟವಾಗುತ್ತದೆ. ಇದರಿಂದ ಕಳೆದ 75 ವರ್ಷಗಳಿಂದ ಸರ್ಕಾರದ ಮೀಸಲಾತಿಯಿಂದ ವಂಚಿತರಾದ ಮತ್ತು ಸಂವಿಧಾನದತ್ತ ಧನಾತ್ಮಕ ತಾರತಮ್ಯದಿಂದ ಸಂಕಷ್ಟಕ್ಕೆ ಒಳಗಾಗಿರುವ ಬ್ರಾಹ್ಮಣ ಜಾತಿಯ ಬಡವರಿಗೆ ಕಾನೂನು ಬದ್ಧವಾಗಿ ದಕ್ಕಬೇಕಾದ ಸೌಲಭ್ಯಗಳನ್ನು ನೀಡಲು ಸಹಾಯವಾಗುತ್ತದೆ ಎಂದು ಅವರು ತಿಳಿಸಿದರು.

ಉಲ್ಲೇಖದಲ್ಲಿ ಓದಲಾದ ಮಾನ್ಯಸರ್ಕಾರದ ಆದೇಶದಲ್ಲಿ, ಜಾತಿ ಮತ್ತು ಉಪಜಾತಿಗಳ ಹೆಸರುಗಳನ್ನು ತಪ್ಪಾಗಿ ಪ್ರಕಟಿಸಲಾಗಿದೆ. ಬ್ರಾಹ್ಮಣ ಎಂಬುದನ್ನು ಬ್ರಾಹ್ಮಣ್ ಎಂಬ ಅಕ್ಷರ ದೋಷಗಳನ್ನು ಸರಿಪಡಿಸಬೇಕೆಂದು
ಹೆಚ್.ಎಸ್.ಸಚ್ಚಿದಾನಂದಮೂರ್ತಿ ವಿನಂತಿಸಿದರು.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ವತಿಯಿಂದ ನಡೆದ ಪತ್ರಿಕಾಗೋಷ್ಠಿ

ಪತ್ರಿಕಾಗೋಷ್ಠಿಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಮೈಸೂರು ಜಿಲ್ಲಾಧ್ಯಕ್ಷ ಕಡಕೋಳ ಜಗದೀಶ್,ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್,ಮಹಿಳಾ ವಿಪ್ರ ಮುಖಂಡರಾದ ವತ್ಸಲ ನಾಗರಾಜ್ ಉಪಸ್ಥಿತರಿದ್ದರು.