ಮೈಸೂರು: ರಾಜ್ಯದ್ಯಂತ ನಡೆಯುವ ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಬ್ರಾಹ್ಮಣ ಸಮಾಜವನ್ನು ಅನೇಕ ಪಂಗಡಗಳಾಗಿ ವಿಭಜಿಸಿರುವ ಕುರಿತು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ಡಿಸಿ ಕಚೇರಿಯಲ್ಲಿ ಆಕ್ಷೇಪಣೆ ಸಲ್ಲಿಸಿವೆ.
ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಕಾಶ್ ನೇತೃತ್ವದಲ್ಲಿ ಸಿದ್ದಾರ್ಥ ಲೇಔಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಅಪರ ಜಿಲ್ಲಾಧಿಕಾರಿ
ಶಿವರಾಜು ಅವರಿಗೆ ಈ ಕುರಿತು ಮನವಿ ಸಲ್ಲಿಸಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಅವರು,
ಈ ರೀತಿ ವಿಂಗಡಣೆಯಿಂದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಅರ್ಹ ಬ್ರಾಹ್ಮಣರಿಗೆ ಸರ್ಕಾರದ ಸೌಲತ್ತು ತಲುಪುವಲ್ಲಿ ತೊಂದರೆ ಉಂಟಾಗುತ್ತದೆ, ಜೊತೆಗೆ ಸಮಾಜದಲ್ಲಿ ಅಗತ್ಯ ಗೊಂದಲ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಸಮೀಕ್ಷೆಯಲ್ಲಿ ಬ್ರಾಹ್ಮಣ ಸಮುದಾಯವನ್ನು ವಿವಿಧ ಕ್ರಮಾಂಕಗಳಲ್ಲಿ ಬೇರ್ಪಡಿಸುವ ಬದಲು ಬ್ರಾಹ್ಮಣ ಎಂಬ ಒಂದೇ ಗುರುತನ್ನು( ಕ್ರಮ ಸಂಖ್ಯೆ 210) ಮಾತ್ರ ನೀಡುವಂತೆ ಒತ್ತಾಯಿಸಿದರು.
ಪಟ್ಟಿಯಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್, ಬ್ರಾಹ್ಮಣ ಮುಸ್ಲಿಂ ಎಂಬೆಲ್ಲಾ ಹೆಸರುಗಳಿರುವುದು ಹೊಸ ಗೊಂದಲಕ್ಕೆ ಕಾರಣವಾಗಿವೆ. ಹೀಗಿರಲು ಸಾಧ್ಯವೇ ಇಲ್ಲ, ತಕ್ಷಣವೇ ಈ ಹೆಸರುಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಕಡಕೋಳ ಜಗದೀಶ್ ಮಾತನಾಡಿ, ಸಮೀಕ್ಷೆಗೆ ಬಂದಾಗ ಬ್ರಾಹ್ಮಣ ಸಮುದಾಯದವರು ‘ಹಿಂದೂ ಬ್ರಾಹ್ಮಣ’ ಎಂದಷ್ಟೇ ನಮೂದಿಸಬೇಕು ಎಂದು ಹೇಳಿದರು.
ಎಷ್ಟೇ ಕಾಲಂಗಳು ಇರಲಿ, ಅಲ್ಲಿ ಬ್ರಾಹ್ಮಣ ಉಪಪಂಗಡಗಳನ್ನು ನಮೂದಿಸುವ ಅಗತ್ಯ ಇಲ್ಲ. ಉಳಿದಂತೆ ಸಾಮಾಜಿಕ, ಶೈಕ್ಷಣಿಕ ವಿವರ ನೀಡಬೇಕು, ಇದರಿಂದಷ್ಟೇ ಬ್ರಾಹ್ಮಣರ ನಿಜವಾದ ಜನಸಂಖ್ಯೆಯ ವಿವರ, ಅವರ ನೈಜ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ತಿಳಿಯಲು ಸಾಧ್ಯ ಎಂದು ಹೇಳಿದರು
ಈ ಸಂದರ್ಭದಲ್ಲಿ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ವಿಪ್ರ ಮುಖಂಡರಾದ ಹರೀಶ್, ನಿರೂಪಕ ಅಜಯ್ ಶಾಸ್ತ್ರಿ ಸೇರಿದಂತೆ ಇನ್ನಿತರ ವಿಪ್ರ ಮುಖಂಡರು ಹಾಜರಿದ್ದರು.