ಪ್ರೀತಿಯ ನಾಟಕವಾಡಿದ ವಿವಾಹಿತ; ಯುವತಿ ಕೊಲೆಗೆ ಯತ್ನ:ಪ್ರಕರಣ ದಾಖಲು

Spread the love

ಮೈಸೂರು: ವಿವಾಹವಾಗಿದ್ದರೂ ಯುವತಿಯೊಬ್ಬಳನ್ನ ಪ್ರೀತಿಸುವ ನಾಟಕವಾಡಿ ಮದುವೆ ಆಗುವುದಾಗಿ ನಂಬಿಸಿ ಚಲ್ಲಾಟವಾಡಿ,ಕೊನೆಗೆ ಆಕೆಯನ್ನ ಮಹಡಿಯಿಂದ ತಳ್ಳಿ ಕೊಲೆಗೆ ಯತ್ನಿಸಿದ ಘಟನೆ ಮೈಸೂರಿನ ದಟ್ಟಗಳ್ಳಿ ಬಡಾವಣೆಯಲ್ಲಿ ನಡೆದಿದೆ.

ಯುವತಿ ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಪ್ರಿಯಕರ ಆಲ್ಬರ್ಟ್, ಈತನ ತಮ್ಮ ಗೋಕುಲ್ ಹಾಗೂ ಪತ್ನಿ ಸುಭಿತ ಮೇಲೆ ಯುವತಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿ ಹಾಗೂ ಆಲ್ಬರ್ಟ್ ಬೆಂಗಳೂರಿನ ಕಾರ್ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಒಂದು ವರ್ಷದ ಹಿಂದೆ ಆಲ್ಬರ್ಟ್ ಮೈಸೂರಿನಲ್ಲಿ ನೆಲೆಸಿದ್ದು ಖಾಸಗಿ ಕಾರ್ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದ. 4 ತಿಂಗಳ ಹಿಂದೆ ಪ್ರೇಯಸಿಯನ್ನೂ ಸಹ ಮೈಸೂರಿಗೆ ಕರೆಸಿಕೊಂಡು ವಿಜಯನಗರದಲ್ಲಿ ಮನೆ ಮಾಡಿ ಇರಿಸಿದ್ದ.

ವಿವಾಹಿತನಾಗಿದ್ದ ಆಲ್ಬರ್ಟ್ ನನ್ನ ಹಾಗೂ ಪತ್ನಿ ನಡುವೆ ವೈವಾಹಿಕ ಜೀವನ ಸರಿ ಇಲ್ಲ, ಡೈವೋರ್ಸ್ ಕೊಡುತ್ತಿದ್ದೇನೆ ನಂತರ ನಿನ್ನನ್ನು ಮದುವೆ ಆಗುತ್ತೇನೆಂದು ನಂಬಿಸಿದ್ದ.

ಕಳೆದ ನಾಲ್ಕಾರು ದಿನಗಳಿಂದ ಆಲ್ಬರ್ಟ್ ಮನೆಗೆ ಬಂದಿರಲಿಲ್ಲ.ಮದುವೆ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿತ್ತು. ಆಲ್ಬರ್ಟ್ ಕೆಲಸ ಮಾಡುತ್ತಿದ್ದ ಕಾರ್ ಶೋರೂಂ ಗೆ ಹೋಗಿ ಪರಿಶೀಲಿಸಿದಾಗ ಅಲ್ಲೂ ಬಂದಿರಲಿಲ್ಲ.

ತಕ್ಷಣ ದಟ್ಟಗಳ್ಳಿಯಲ್ಲಿದ್ದ ಆಲ್ಬರ್ಟ್ ಮನೆಗೆ ಯುವತಿ ಹೋದಾಗ ಆತನ ಪತ್ನಿ ಸುಭಿತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ನಂತರ ಆಲ್ಬರ್ಟ್ ತಮ್ಮ ಗೋಕುಲ್ ಕೂಡಾ ಯುವತಿಯನ್ನ ನಿಂದಿಸಿದ್ದಾರೆ.ಈ‌ ವೇಳೆ ಆಲ್ಬರ್ಟ್ ಬಂದು ಮಹಡಿಯಿಂದ ಕೆಳಗೆ ತಳ್ಳುವಂತೆ ಗೋಕುಲ್ ಗೆ ಸೂಚಿಸಿದ್ದಾನೆ.ನಂತರ ಆತನೂ ಎರಡನೇ ಮಹಡಿಗೆ ಹೋಗಿ ತಮ್ಮನೊಂದಿಗೆ ಸೇರಿ ಯುವತಿಯನ್ನ ಕೆಳಗೆ ತಳ್ಳಿದ್ದಾರೆ.

ಇದರಿಂದಾಗಿ ಯುವತಿ ತೀವ್ರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆ ಮಾಡಲೆಂದೇ ಮಹಡಿಯಿಂದ ಕೆಳಗೆ ತಳ್ಳಿದ್ದಾರೆಂದು ಆರೋಪಿಸಿ ಯುವತಿ ಆಲ್ಬರ್ಟ್ ಸೇರಿದಂತೆ ಮೂವರ ವಿರುದ್ದ ದೂರು ದಾಖಲಿಸಿದ್ದಾರೆ.