ಮದ್ದೂರು: ಕಾಂಗ್ರೆಸ್‌ನ ಮತಬ್ಯಾಂಕ್ ರಾಜಕಾರಣದಿಂದಾಗಿ ರಾಜ್ಯದಲ್ಲಿ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗುತ್ತಿವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.
ಮದ್ದೂರಿಗೆ ಬಿಜೆಪಿ ನಿಯೋಗ ಭೇಟಿ ನೀಡಿದ ವೇಳೆ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಲ್ಲಿ ಯಾರು ಸತ್ತರೂ ತಮಟೆ ಹೊಡೆದುಕೊಂಡು ಹೋಗುವಂತಿಲ್ಲ. ಮಸೀದಿ ಮುಂದೆ ಮಾತ್ರ ಮೌನವಾಗಿ ಸಾಗಬೇಕಾಗುತ್ತದೆ. ಸಿಎಂ ಸಿದ್ದರಾಮಯ್ಯನವರಿಂದಾಗಿ ನಮ್ಮನ್ನು ಏನೂ ಮಾಡಲ್ಲ ಎಂಬ ಭಾವನೆ ಮುಸ್ಲಿಮರಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಂಜಾನ್ ಸಮಯದಲ್ಲಿ ದೇವಾಲಯದ ಮುಂಭಾಗ ಮುಸ್ಲಿಮರು ಮೆರವಣಿಗೆ ಹೋಗಬಹುದು. ಆದರೆ ಹಿಂದೂಗಳು ಮಸೀದಿ ಮುಂಭಾಗ ಮೌನವಾಗಿ ಇರಬೇಕು ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಮದ್ದೂರಿನಲ್ಲಿ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಜನರು ಬಂದಿದ್ದಾರೆ. ಈಗ ಕಲ್ಲು ಹೊಡೆದಿರುವವರು ಮುಂದೆ ಬಾಂಬ್ ಹಾಕುತ್ತಾರೆ. ಕಾಂಗ್ರೆಸ್ ನಾಯಕರು ಇವರು ನಮ್ಮ ಬ್ರದರ್‌ಗಳು ಎಂದು ಹೇಳುತ್ತಾರೆ. ಇಲ್ಲಿನ ಕಾಂಗ್ರೆಸ್ ಶಾಸಕರು ಕೂಡ ಅದನ್ನೇ ಹೇಳುತ್ತಾರೆ. ಆ ಬೆಂಬಲದಿಂದಲೇ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗಿವೆ. ಈ ತಾಲಿಬಾನ್ ಸರ್ಕಾರ ಮುಸ್ಲಿಮರಿಗೆ ಬೆಂಬಲ ನೀಡುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
ಮೆರವಣಿಗೆ ಸಮಯದಲ್ಲೇ ಹೆಚ್ಚು ಪೊಲೀಸರನ್ನು ನಿಯೋಜಿಸಬೇಕಿತ್ತು. ಅದನ್ನು ಸರ್ಕಾರ ಮಾಡಲೇ ಇಲ್ಲ. ಮಾಡಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿರುವುದರಿಂದ ಇಡೀ ದೇಶ ಇತ್ತ ಕಡೆ ನೋಡುತ್ತಿದೆ ಇದು ನಾಚಿಕೆ ವಿಚಾರ ಎಂದು ವ್ಯಂಗ್ಯವಾಡಿದರು.
ಕಲ್ಲು ಹೊಡೆದಿರುವವರು ಇಲ್ಲಿಯವರು ಅಲ್ಲ ಎಂದಾದರೆ ಅವರೇನು ಪಾಕಿಸ್ತಾನದಿಂದ ಬಂದಿದ್ದಾರಾ, ಇದು ಪೂರ್ವ ನಿಯೋಜಿತ ಕೃತ್ಯ,ಗುಪ್ತಚರ ಇಲಾಖೆ ಇದನ್ನು ಪತ್ತೆ ಮಾಡಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡರು.
ಡಿಸಿಎಂ ಡಿ.ಕೆ.ಶಿವಕುಮಾರ್ ಹಿಂದೂ ಎಂದು ಹೇಳಿಕೊಳ್ಳುತ್ತಾರೆಯೇ ಹೊರತು, ಅವರಿಗೆ ಯಾವ ಅಭಿಮಾನವೂ ಇಲ್ಲ ಅವರು ನಿರಾಶರಾಗಿದ್ದಾರೆ ಎಂದು ಅಶೋಕ್ ಟಾಂಗ್ ನೀಡಿದರು.