ಬೆಂಗಳೂರು: ಧರ್ಮಸ್ಥಳ ಆಯ್ತು, ಚಾಮುಂಡೇಶ್ವರಿ ಆಯ್ತು, ಈಗ ಮದ್ದೂರು. ಈ ಘಟನೆಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಮದ್ದೂರು ಕಲ್ಲೆಸೆತ ಮತ್ತು ಲಾಠಿಚಾರ್ಜ್ ಹೇಯಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲೆಸೆತಕ್ಕೆ ಸರ್ಕಾರದ ಕುಮ್ಮಕ್ಕಿದೆ. ಈ ಘಟನೆಗೆ ನೇರ ಕಾರಣ ಪೊಲೀಸ್ ಅಲ್ಲ, ಸರ್ಕಾರದ ಕುಮ್ಮಕ್ಕಿಲ್ಲದೇ ಈ ಘಟನೆಗಳು ನಡೆಯುತ್ತಿರಲಿಲ್ಲ ಎಂದು ದೂರಿದರು.
ನಾವು ಪಾಕಿಸ್ತಾನದಲ್ಲಿದ್ದೇವೋ ಕರ್ನಾಟಕದಲ್ಲಿದ್ದೀವೋ ಅನಿಸುತ್ತಿದೆ, ತಿಮರೋಡಿ ಗ್ಯಾಂಗ್ ಸಿದ್ದರಾಮಯ್ಯ ಸುತ್ತ ಸುತ್ತಿಕೊಂಡಿದ್ದಾರೆ. ಗಣಪತಿ ವಿಸರ್ಜನೆಗೆ ಮೆರವಣಿಗೆ ಮಾಡುವುದು ಸಾರ್ವಜನಿಕ ರಸ್ತೆಯಲ್ಲಿ,ಅದೇನು ಇವರ ಅಪ್ಪನ ಆಸ್ತಿನಾ? ನಾವು ಟ್ಯಾಕ್ಸ್ ಕೊಟ್ಟಿರುವುದು ಎಂದು ತರಾಟೆಗೆ ತೆಗೆದುಕೊಂಡರು.
ಅಲ್ಲಿ ಒಂದು ಮೀಸಲು ಪಡೆ ಇಟ್ಟಿದ್ದರೆ ಲಾಠಿ ಚಾರ್ಜ್ ಅವಶ್ಯಕತೆ ಇತ್ತಾ ಹಿಂದೂಗಳ ಮೇಲೆ ಲಾಠಿ ಚಾರ್ಜ್, ದುಷ್ಕರ್ಮಿಗಳಿಗೆ ಯಾಕೆ ಬಡಿದಿಲ್ಲ? ಕಲ್ಲು ಎಸೆದವರಿಗೆ ಯಾಕೆ ಬಡಿದಿಲ್ಲ? ಮದ್ದೂರು ಘಟನೆಗೆ ಸಿಎಂ, ಡಿಸಿಎಂ ಕ್ಷಮೆ ಕೇಳಬೇಕು ಎಂದು ಅಶೋಕ್ ಆಗ್ರಹಿಸಿದರು.
ವಿಧಾನಸೌಧದಲ್ಲೆ ಪಾಕಿಸ್ತಾನ ಪರ ಕೂಗಿದ ಮೇಲೆ ನಮ್ಮನ್ನು ಏನೂ ಮಾಡಲ್ಲ ಅಂತಾ ಟಿಪ್ಪು ಗ್ಯಾಂಗ್ಗೆ ಅನ್ನಿಸಲು ಶುರುವಾಯಿತು. ಈಗ ಎಲ್ಲಾ ಕಡೆ ಗಲಭೆಗಳನ್ನು ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಹಿಂದೂಗಳು ಒಗ್ಗಟ್ಟಾಗಿಲ್ಲ ಅಂದರೆ ಇನ್ನುಮುಂದೆ ಇದೇ ಗತಿ. ವೋಟಿಗೋಸ್ಕರ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ. ಅಧಿಕಾರ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ.ಮುಂದೆ ನಿಮ್ಮ ಮನೆಯಲ್ಲೇ ಬಂದು ಹೊಡೆಯುತ್ತಾರೆ, ಎಚ್ಚರಿಕೆಯಿಂದಿರಿ ಎಂದು ವಿಪಕ್ಷ ನಾಯಕ ಸಲಹೆ ನೀಡಿದರು.
ಬೆಂಕಿ ಇಡುವುದೇ ಕಾಂಗ್ರೆಸ್ ಕೆಲಸ. ಹಿಂದೂಗಳು ಸಹಿಷ್ಣುಗಳು. ಕಾಂಗ್ರೆಸ್ ಸರ್ಕಾರ ಇರುವುದರಿಂದ ಹಿಂದೂ ಮೆರವಣಿಗೆ ವೇಳೆ ಗಲಾಟೆ ಆಗುತ್ತದೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ಅಶೀಕ್ ಕಿಡಿಕಾರಿದರು.