ಮೈಸೂರು: ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿಸಿದ ವಂಚಕರು ಸರ್ಕಾರಿ ಆಸ್ಪತ್ರೆ ನರ್ಸ್ ಒಬ್ಬರಿಗೆ ಬರೋಬ್ಬರಿ 27,49,999 ರೂ ವಂಚಿಸಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೈಸೂರಿನ ಬೃಂದಾವನ ಬಡಾವಣೆ ವಾಸಿ ಸರ್ಕಾರಿ ಆಸ್ಪತ್ರೆ ಹಿರಿಯ ನರ್ಸ್ ಅಮರಜಾ ಪಿ ಹೆಗ್ಗಡೆ ಹಣ ಕಳೆದುಕೊಂಡವರು.
ಕೆಲ ದಿನಗಳ ಹಿಂದೆ ಮುಂಬೈ ಕ್ರೈಂ ಬ್ರಾಂಚ್ ನಿಂದ ಎಂದು ಹೇಳಿ ವ್ಯಕ್ತಿಯೊಬ್ಬ ನರೇಶ್ ಗೋಯಲ್ ಅವರು ಮನಿಲಾಂಡ್ರಿಂಗ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ನಿಮ್ಮ ಖಾತೆಗೆ 20% ಕಮೀಷನ್ ವರ್ಗಾವಣೆ ಆಗಿದೆ.ಆದ್ದರಿಂದ ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನ ಪರಿಶೀಲಿಸಬೇಕೆಂದು ಬೆದರಿಕೆ ಹುಟ್ಟಿಸಿದ್ದಾರೆ.
ತನಿಖೆಗೆ ಸಹಕರಿಸದಿದ್ದರೆ ಅರೆಸ್ಟ್ ಮಾಡುವುದಾಗಿ ತಿಳಿಸಿದ್ದಾರೆ.ನಂತರ ಬ್ಯಾಂಕ್ ಮೂಲಕ 99,999 ರೂ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬ್ಯಾಂಕ್ ಖಾತೆಯ ಸ್ಕ್ರೀನ್ ಶಾಟ್ ಪಡೆದುಕೊಂಡು ಆರ್ ಟಿ ಜಿ ಎಸ್ ಟ್ರಾಕ್ ಮಾಡಬೇಕೆಂದು ತಿಳಿಸಿ ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಬೆದರಿಸಿ 4.5 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ನಂತರ ಪತಿಯ ಖಾತೆಯಿಂದಲೂ 22 ಲಕ್ಷ ವರ್ಗಾವಣೆ ಮಾಡಿಕೊಂಡು ನಿಮ್ಮ ಪಿಎಫ್ ಖಾತೆಯ ಹಣ ವರ್ಗಾವಣೆ ಮಾಡುವಂತೆ ತಿಳಿಸಿದಾಗ ಅಮರಜಾ ಪಿ ಹೆಗ್ಗಡೆ ಅವರಿಗೆ ತಾವು ಮೋಸ ಹೋಗಿರುವುದು ಖಚಿತವಾಗಿದೆ.
ಈ ಸಂಬಂಧ ಸೆನ್ ಪೊಲೀಸ್ ಠಾಣೆಗೆ ನರ್ಸ್ ದೂರು ನೀಡಿದ್ದು,ಪ್ರಕರಣ ದಾಖಲಾಗಿದೆ.