ಹುಣಸೂರು: ಹುಣಸೂರಿನ ಜಿಎಲ್‌ಬಿ ರಸ್ತೆಯಲ್ಲಿ ಡಾಂಬರೀಕರಣ ಮಾಡಿ ಆರು ತಿಂಗಳು ಕಳೆಯುವಷ್ಟರಲ್ಲೇ ರಸ್ತೆ ಕಿತ್ತು ಹೋಗಿ ಗುಂಡಿಗಳು ತುಂಬಿ ರಾಡಿ ಆಗಿಬಿಟ್ಟಿದೆ.
ಗುಂಡಿಗಳಲ್ಲಿ ನೀರು ತುಂಬಿ ಭಾನುವಾರ ಬೆಳಗ್ಗೆನೇ ಮಹಿಳೆಯೊಬ್ಬರು ಹೋಗುತ್ತಿದ್ದ ಸ್ಕೂಟಿ ಗುಂಡಿಯಲ್ಲಿ ಬಿದ್ದು ಆಕೆ ಕೆಳಗುರುಳಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಆಗಿಲ್ಲ.ಇದು ಒಂದು ಸಣ್ಣ ಉದಾಹರಣೆಯಷ್ಟೇ,ಪ್ರತಿದಿನ ಹೀಗೆ ಗುಂಡಿಯಲ್ಲಿ ಬೀಳುವವರು ಹೆಚ್ಚು.
ಇದು ಹುಣಸೂರಿನ ಪ್ರಮುಖ ರಸ್ತೆಯಾಗಿದ್ದು ಅಂಗಡಿ ಮುಂಗಟ್ಟುಗಳು ಈ ರಸ್ತೆಯುದ್ದಕ್ಕೂ ಇರುವುದರಿಂದ ಸಾರ್ವಜನಿಕರು ವ್ಯಾಪಾರಕ್ಕೆ ಬರುತ್ತಲೇ ಇರುತ್ತಾರೆ. ಸದಾ ವಾಹನಗಳ ಸಂಚಾರವು ಇದ್ದೇ ಇರುತ್ತದೆ.

ಇಂತಹ ಪ್ರಮುಖ ರಸ್ತೆಯಲ್ಲಿ ಡಾಂಬರೀಕರಣ ಮಾಡಿದ ಕುರಹು ಕೂಡಾ ಇಲ್ಲದಂತೆ ರಸ್ತೆ ಹದಗೆಟ್ಟು ಹೋಗಿದೆ. ಅದು ಯಾವ ರೀತಿ ಕೆಲಸ ಮಾಡಿದ್ದಾರೊ ಏನು ಕಥೆಯೊ, ಇದು ಅತ್ಯಂತ ಕಳಪೆ ಕಾಮಗಾರಿ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸದಾ ಮಳೆ ಬರುತ್ತಲೇ ಇರುತ್ತದೆ. ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಐವತ್ತಕ್ಕೂ ಹೆಚ್ಚು ಗುಂಡಿಗಳಿವೆ.
ಎಲ್ಲ ಗುಂಡಿಗಳಲ್ಲಿ ನೀರು ತುಂಬಿ ರಾಡಿಯಾಗಿದೆ.
ಜನ ರಾತ್ರಿ ವೇಳೆ ಓಡಾಡಲು ಭಯಪಡುತ್ತಾರೆ, ಏಕೆಂದರೆ ಎಲ್ಲಿ ರಾತ್ರಿ ವೇಳೆ ಗುಂಡಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಳ್ಳುತ್ತೇವೊ ಎಂಬ ಆತಂಕ ಜನರಿಗೆ.
ಅದು ಯಾವ ರೀತಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದರೆ ಬರೀ ಮಣ್ಣು ತುಂಬಿದೆ ಡಾಂಬರು ಎಲ್ಲೂ ಕಾಣಿಸುವುದಿಲ್ಲ ಎಂದ ಜೆ ಎಲ್ ಬಿ ರೋಡ್ ಜನತೆ ಹಾಗೂ ಹುಣಸೂರು ಜನ ವಾರ್ಡ್ ಅಧ್ಯಕ್ಷರು ಮತ್ತು ಶಾಸಕರು ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಸುಮಾರು 20 ಲಕ್ಷ ರೂ ವೆಚ್ಚ ಮಾಡಿ ರಸ್ತೆ ಕಾಮಗಾರಿ ಮಾಡಲಾಗಿದೆ, ನಗರಸಭೆ ಅಧಿಕಾರಿಗಳು ಜನಪ್ರತಿನಿಧಿಗಳು ಇಂತಹ ಕೆಟ್ಟ ರಸ್ತೆ ಕಾಮಗಾರಿ ಮಾಡಿದ್ದಾರೆ.ಜನರ ಹಣ ಪೋಲು ಮಾಡಿದ್ದಾರೆ,ಇದರಲ್ಲಿ ಯಾರು ಶಾಮೀಲಾಗಿದ್ದಾರೊ ಗೊತ್ತಿಲ್ಲ ಎಲ್ಲರ ಮೇಲೂ ಕ್ರಮ ಜರುಗಿಸಬೇಕು ಎಂದು ಜನ ಹಾಗೂ ಚಲುವರಾಜು ಆಗ್ರಹಿಸಿದ್ದಾರೆ.
ಕೂಡಲೇ ಜಿ ಎಲ್ ಬಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಜಲ್ಲಿ, ಮಣ್ಣು ತುಂಬಿ ಡಾಂಬರೀಕರಣ ಮಾಡಿ ಸರಿಪಡಿಸದಿದ್ದರೆ ಜನರೊಂದಿಗೆ ಸೇರಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಚಲುವರಾಜು ಎಚ್ಚರಿಸಿದ್ದಾರೆ.