ಈ ಬಾರಿಯ ದಸರಾ ದೀಪಾಲಂಕಾರ ಹೆಚ್ಚು ಆಕರ್ಶಕ-ಮುನಿಗೋಪಾಲ ರಾಜು

Spread the love

ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ದೀಪಾಲಂಕಾರ ಮತ್ತು ಡ್ರೋನ್ ಶೋ ಹೆಚ್ಚು ಆಕರ್ಷಣೀಯವಾಗಿ ಮಾಡಲು ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ ರಾಜು ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಈ ಬಾರಿಯ ದಸರಾ ಮಹೋತ್ಸವದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಮತ್ತಷ್ಟು ಮೆರಗು ನೀಡಲು ನಿರ್ಧರಿಸಿದ್ದೇವೆ, ಅರಮನೆ ದೀಪಾಲಂಕಾರಕ್ಕೆ ಪೂರಕವಾದ ಬಣ್ಣದಲ್ಲಿ ಮೈಸೂರು ನಗರದ ದೀಪಗಳು ಬೆಳಗಲಿವೆ ಎಂದು ಹೇಳಿದರು.

ಕಳೆದ ಬಾರಿಯಂತೆ ಈ ಬಾರಿಯೂ ಸುಮಾರು 136 ಕಿ.ಮೀ ರಸ್ತೆಗಳವರೆಗೆ ದೀಪಾಲಂಕಾರ ಮಾಡಲಾಗುತ್ತದೆ. ಸುಮಾರು 60ರಿಂದ 70 ಪ್ರತಿಕೃತಿಗಳನ್ನ ದೀಪಾಲಂಕಾರದಲ್ಲಿ ನಿರ್ಮಿಸುತ್ತಿದ್ದೇವೆ. ಈ ಬಾರಿ ದೀಪಾಲಂಕಾರದಲ್ಲಿ ವಿಶೇಷ ಅಂದರೆ ಕೊಲ್ಕತ್ತಾ ಮಾದರಿಯ ಮೂವಿಂಗ್ ಲೈಟ್ಸ್ ಪರಿಕಲ್ಪನೆ ಇದೆ, ಬೇರೆ ಬೇರೆ ಕಡೆಗಳಿಂದಲೂ ಆಕರ್ಷಣಿಯ ದೀಪಗಳನ್ನ ತರಿಸಲಾಗುತ್ತದೆ ಎಂದು ವಿವರಿಸಿದರು.

ದಸರಾ ಮಹೋತ್ಸವದಲ್ಲಿ ಡ್ರೋನ್ ಶೋ ಕೂಡಾ ಎಲ್ಲರ ಮನ ಸೆಳೆಯಲಿದೆ, ಕಳೆದ ವರ್ಷ 1500 ಡ್ರೋನ್ ಉಪಯೋಗಿಸಿದ್ದೆವು, ಈ ಬಾರಿ 3 ಸಾವಿರ ಡ್ರೋನ್ ಗಳನ್ನ ಬಳಸಿ ಬನ್ನಿಮಂಟಪದಲ್ಲಿ ಡ್ರೋನ್ ಶೋ ಮಾಡುತ್ತಿದ್ದೇವೆ . ತಾಯಿ ಚಾಮುಂಡೇಶ್ವರಿ, ದಸರಾ ಅಂಬಾರಿ ವಿವಿಧ ಆಕೃತಿಗಳನ್ನ ಮೂಡಿಸಲಾಗುತ್ತದೆ, ಈ ಕಾಮಗಾರಿಗಳಿಗೆ 9 ರಿಂದ 10 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಮುನಿಗೋಪಾಲ ರಾಜು ಮಾಹಿತಿ ನೀಡಿದರು.