ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಸೃಜನಶೀಲತೆ ವೃದ್ಧಿ:ಡಾ.ಹೊನ್ನೇಗೌಡ

ನಂಜನಗೂಡು: ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅವರ ಸಾಮಾಜಿಕ ಜವಾಬ್ದಾರಿ, ಸೃಜನಶೀಲತೆ, ನೈತಿಕ ಮೌಲ್ಯಗಳು ಮತ್ತು ವ್ಯಕ್ತಿತ್ವದ ಸಮಗ್ರ ಬೆಳವಣಿಗೆ ವೃದ್ಧಿಯಾಗುತ್ತದೆ ಎಂದು ನಂಜನಗೂಡಿನ ಜೆಎಸ್ಎಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೊನ್ನೇ ಗೌಡರು ತಿಳಿಸಿದರು.

ನಂಜನಗೂಡು ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇವುಗಳೆಲ್ಲ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸಲು, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿಕೊಂಡು ಹೋಗಲು, ಮತ್ತು ಹೊಣೆಗಾರ ನಾಗರಿಕರಾಗಿ ರೂಪುಗೊಳ್ಳಲು ಸಹಾಯ ಮಾಡುತ್ತವೆ ಎಂದು ಹೊನ್ನೇಗೌಡ ಹೇಳಿದರು.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಾಗ ವಿದ್ಯೆ ,ಸೋದರತ್ವ ,ಸಮಾನತೆ ,ಮೌಲ್ಯಗಳನ್ನು ಗಾಢವಾಗಿ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುತ್ತಾರೆ ಎಂದು ದೇವನೂರು ಕಾಲೇಜಿನ ಪ್ರಾಂಶುಪಾಲರಾದ ಚನ್ನಬಸಪ್ಪ ಅವರು ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆಗಳು ಶಿಸ್ತು, ಸಮಯಪ್ರಜ್ಞೆ, ಜೀವನ ಶೈಲಿಯ ಸೂಕ್ತತೆ ಬೆಳೆಸುತ್ತದೆ ಎಂದು ಜೆಎಸ್ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್‌ ದಿನೇಶ್ ಅವರು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಅನಾವರಣಗೊಳಿಸುವುದವರ ಜೊತೆಗೆ ಸಾಮಾಜಿಕ ಜ್ಞಾನ ಮತ್ತು ಜವಾಬ್ದಾರಿಯನ್ನು ಈ ಸ್ಪರ್ಧೆಗಳು ಮೂಡಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ವೆಂಕಟೇಶ್, ಪ್ರಸಾದ್, ಅನಿತಾ ಕುಮಾರಿ, ಹೇಮಂತ್ ಕುಮಾರ್, ಪ್ರವೀಣ್, ಉಪನ್ಯಾಸಕರಾದ ಡಾ.ಮಾಲತಿ ,ಡಾ. ಉಮೇಶ್ ಲಿಂಗಣ್ಣ ಸ್ವಾಮಿ, ರಂಗಸ್ವಾಮಿ, ಸುರೇಶ್, ರವಿ ಇಂದ್ರ ,ಸನತ್ ಆಂಕಶೆಟ್ಟಿ, ಲೋಕೇಶ್ ಕೋಮಲ, ನಾಗರಾಜು ಮುಂತಾದವರು ಉಪಸ್ಥಿತರಿದ್ದರು.