ಮೈಸೂರು: ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧನೆ ಮಾಡುವುದರ ಮೂಲಕ ಶಿಕ್ಷಣವನ್ನೇ ಆಸ್ತಿಯನ್ನಾಗಿ ಮಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಮೈಸೂರು ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಚಿಕ್ಕಂದಿನಲ್ಲೇ ಉತ್ತಮ ವಿದ್ಯಾರ್ಥಿಯಾಗಿದ್ದೆ, ಯುಪಿಎಸ್ಸಿ ತರಬೇತಿಯಲ್ಲಿಯೂ ನನಗೆ ಚಿನ್ನದ ಪದಕ ಬಂದಿತ್ತು, ಅದು ನಮ್ಮ ತಂದೆ ತಾಯಿಯ ಪುಣ್ಯ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟಗಳಾಗಿದ್ದು ಚೆನ್ನಾಗಿ ಓದಿ, ತಂದೆ ತಾಯಿಯರಿಗೆ ಒಳ್ಳೆಯ ಮಕ್ಕಳಾಗಿರಿ ಎಂದು ಕಿವಿ ಮಾತು ಹೇಳಿದರು.
ಪಿಡಿಒಗಳು ಸ್ಥಳೀಯ ಹಂತದಲ್ಲಿ ಗ್ರಾಮಸ್ಥರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಉತ್ತಮ ಕೆಲಸ ಮಾಡಬೇಕೆಂದು ಸಲಹೆ ನೀಡಿದ ಯುಕೇಶ್ ಕುಮಾರ್, ತಮ್ಮ ಆರೋಗ್ಯ ಮತ್ತು ಕೌಟಂಬಿಕ ಜೀವನದತ್ತ ಹೆಚ್ಚು ಗಮನ ನೀಡಿ ಎಂದು ತಿಳಿಸಿದರು.
ನಿವೃತ್ತರಾದ ಉಪಕಾರ್ಯದರ್ಶಿ, ಕೃಷ್ಣಂರಾಜು ಹಾಗೂ ಪಿಡಿಒಗಳು ಒಳ್ಳೆಯ ಕೆಲಸ ಮಾಡಿದ್ದಾರೆ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಕಾರ್ಯ ಕ್ರಮದಲ್ಲಿಅ ಜಿಪಂ ಉಪಕಾರ್ಯದರ್ಶಿ ಬಿ.ಎಂ. ಸವಿತ, ಉಪಕಾರ್ಯದರ್ಶಿ ಅಭಿವೃದ್ಧಿ ಭೀಮಪ್ಪ ಕೆ. ಲಾಳಿ, ಲೆಕ್ಕಾಧಿಕಾರಿ ಸಿದ್ದಗಂಗಮ್ಮ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಿ. ಕೃಷ್ಣ, ಜೆರಾಲ್ಡ್ ರಾಜೇಶ್, ಧರಣೇಶ್, ಪ್ರೇಮ್ ಕುಮಾರ್ ಕುಲದೀಪ್, ಎ.ಎನ್. ರವಿ, ಹೊಂಗಯ್ಯ, ಸುನಿಲ್ ಕುಮಾರ್, ಪಿ.ಎಸ್. ಅನಂತರಾಜು, ಜಿಲ್ಲಾ ಪಿಡಿಒ ಸಂಘದ ಅಧ್ಯಕ್ಷ ಕೆ. ರುಕ್ಮಾಂಗದ, ಉಪಾಧ್ಯಕ್ಷ ಮೊಹಮ್ಮದ್ ಇಸ್ತಾಕ್, ಖಜಾಂಚಿ ಸಿ. ಪ್ರಕಾಶ್, ರಾಘವೇಂದ್ರ ಪ್ರಸನ್ನ, ಟಿ. ಸೌಮ್ಯಲತಾ, ಮಹದೇವಸ್ವಾಮಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.