ಲೇಖಕಿಗೆ ಅಪಮಾನ ಬಿಜೆಪಿಗರ ವಿರುದ್ಧ ಕ್ರಮ ಆಗಲಿ: ಸೀತಾರಾಮ್ ಗುಂಡಪ್ಪ

Spread the love

ಮೈಸೂರು: ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಸರ್ಕಾರದಿಂದ ಆಹ್ವಾನ ನೀಡಿರುವ ಕನ್ನಡದ ಹೆಸರಾಂತ ಲೇಖಕಿ ಹಾಗೂ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ ಭಾನು ಮುಷ್ತಾಕ್ ಅವರಿಗೆ ಅಪಮಾನ ಮಾಡುವುದು ಸರಿಯಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.

ಅಪಮಾನ ‌ಆಗುವ ರೀತಿ ಹಾಗೂ ಸಮಾಜದಲ್ಲಿ ಅಶಾಂತಿ, ಶಾಂತಿಭಂಗ ಆಗಲು ಪ್ರಚೋದನೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಆಗ್ರಹಿಸಿದ್ದಾರೆ.

ಭಾನು ಮುಷ್ತಾಕ್ ಅವರ ರಾಷ್ಟ್ರಪ್ರೇಮ ಹಾಗೂ ಕನ್ನಡ ಪ್ರೀತಿಯನ್ನೇ ಕೇವಲ ಧರ್ಮದ ಆಧಾರದಲ್ಲಿ ಪ್ರಶ್ನಿಸುತ್ತಿರುವ ಬಿಜೆಪಿಗರ ನಡೆ ಅವರ ಹೀನ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಸ್ತ ಆರೂವರೆ ಕೋಟಿ ಕನ್ನಡಿಗರೆಲ್ಲರು ಎಂದಿಗೂ ಸಹ ಭಾನು ಮುಷ್ತಾಕ್ ಅವರನ್ನು ಧರ್ಮದ ಆಧಾರದಲ್ಲಿ ನೋಡಿಲ್ಲ, ಮೈಸೂರಿನ ದಸರಾ ಹಬ್ಬದ ಉದ್ಘಾಟನೆಯನ್ನು ಭಾನು ಮುಷ್ತಾಕರಿಂದ ಮಾಡಿಸುತ್ತಿರುವುದು ಎಲ್ಲ ಕನ್ನಡಿಗರಿಗೂ ಹೆಮ್ಮೆಯ ವಿಷಯ ಹಾಗೂ ನಾವು ನೀಡುತ್ತಿರುವ ಗೌರವ ಎಂದು ತಿಳಿಸಿದ್ದಾರೆ.

ಬಾನು ಅವರು ತಮ್ಮ ಕನ್ನಡದ ಬರಹಗಳಿಂದ ಭಾಷೆಗೆ ಹಿರಿಮೆ ಮತ್ತು ಗರಿಮೆಯನ್ನು ತಂದು ಕೊಟ್ಟಿರುವಂತಹ ಶ್ರೇಯಸ್ಸು ಅವರಿಗಿದೆ. ಕೆಲ ಬಿಜೆಪಿಯ ಡೋಂಗಿ ನಾಯಕರ ಈ ರೀತಿಯ ಹೇಳಿಕೆಗಳು ಎಲ್ಲ ಕನ್ನಡಿಗರಿಗೂ ಮಾಡುತ್ತಿರುವ ಅಪಮಾನ. ಕೆಲಸ ಕಾರ್ಯವಿಲ್ಲದ ಕೋಮುವಾದಿ ನಾಯಕರುಗಳು ಕೂಡಲೇ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದ್ದಾರೆ.