ಗಾಯಗೊಂಡಿದ್ದ ಹುಲಿ ಬನ್ನೇರುಘಟ್ಟ ಉದ್ಯಾನವನಕ್ಕೆ ಸ್ಥಳಾಂತರ

Spread the love

ಮೈಸೂರು: ನಾಗರಹೊಳೆ ಉದ್ಯಾನವನದಲ್ಲಿ ಹುಲಿಗಳ ಕಾದಾಟದಲ್ಲಿ ತೀವ್ರ ಗಾಯಗೊಂಡಿದ್ದ ಹುಲಿಯನ್ನು ರಕ್ಷಿಸಿ, ಸೂಕ್ತ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ

ಸುಮಾರು 11 ವರ್ಷದ ಮೂಗ ಎಂದೇ ಕರೆಯಲಾಗುತ್ತಿದ್ದ ಗಂಡು ಹುಲಿ‌‌ ಕಾದಾಟದಲ್ಲಿ ತೀವ್ರ ರಕ್ತಸ್ರಾವ ದಿಂದ ಚಿಂತಾಜನಕ ಸ್ಥಿತಿಯಲ್ಲಿತ್ತು,ಅದನ್ನು ರಕ್ಷಿಸಿ, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ.

ನಾಗರಹೊಳೆ ವಲಯದ ಕುಂತೂರು ಅರಣ್ಯ ಸಫಾರಿ ಪ್ರದೇಶದಲ್ಲಿ ಪ್ರವಾಸಿಗರ ಆಕರ್ಷಕವಾಗಿದ್ದ ಮೂಗ ಹುಲಿ ಇನ್ನೊಂದು ಗಂಡು ಹುಲಿಯ ಜೊತೆ ಕಾದಾಟ ನಡೆಸಿ ತೀವ್ರ ಗಾಯಗೊಂಡಿತ್ತು.

ಮೂಗ ಮೂರ್‍ನಾಲ್ಕು ದಿನಗಳ ಹಿಂದೆ ಕುಟ್ಟ-ಪೊನ್ನಂಪೇಟೆ ಮುಖ್ಯ ರಸ್ತೆ ಮಧ್ಯದಲ್ಲೇ ನಿತ್ರಾದಿಂದ‌ ಕುಳಿತಿತ್ತು.

ನಾಗರಹೊಳೆ ಡಿಸಿಎಫ್‌ ಸೀಮಾ ಪಿ.ಎ.ಅವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಿ ಶಾರ್ಪ್‌ ಶೂಟರ್‌ ಕೆ.ಪಿ.ರಂಜನ್‌ ಅವರು ಅರವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿದ್ದರು.

ಅರಣ್ಯಇಲಾಖೆಯ ಪಶು ವೈದ್ಯಾಧಿಕಾರಿಗಳಾದ ಡಾ.ಎಚ್‌.ರಮೇಶ್‌, ಡಾ.ವಾಸಿಂ ಮಿರ್ಜಾ ಅವರು ನಿತ್ರಾಣಗೊಂಡಿದ್ದ ಹುಲಿಯ ಗಾಯಗಳಿಗೆ ಪ್ರಥಮ ಚಿಕಿತ್ಸೆ ನೀಡಿದರು.

ನಂತರ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಹುಲಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ವಾಹನದ ಮೂಲಕ ಸ್ಥಳಾಂತರಿಸಲಾಯಿತು ಎಂದು ನಾಗರಹೊಳೆ ಹುಲಿಯೋಜನೆ ನಿರ್ದೇಶಕಿ ಪಿ.ಎ.ಸೀಮಾ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಾಗರಹೊಳೆ ಉಪವಿಭಾಗದ ಎಸಿಎಫ್‌ ಅನನ್ಯಕುಮಾರ್‌, ಆರ್‌ಎಫ್‌ಒ ಎಚ್‌.ಎಂ.ಮಂಜುನಾಥ್‌, ಡಿಆರ್‌ಎಫ್‌ಒ ಗಳಾದ ಗುರುಮೂರ್ತಿ, ನಾಗರಾಜು, ಚೇತನ್‌ಕುಮಾರ್‌ಕೋಳೂರ, ಖಂಡೆ ಪಾಲ್ಗೊಂಡಿದ್ದರು.