ಹುಣಸೂರು: ಹುಣಸೂರು ತಾಲೂಕು ಉದ್ದೂರು ಕಾವಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಕುಪ್ಪೆ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟು ಹೋಗಿದ್ದು ಜನ ಬದುಕಲಾರದ ಸ್ಥಿತಿಯಲ್ಲಿದ್ದಾರೆ.
ಚರಂಡಿಯಲ್ಲಿ ಕಸ ತೆಗೆದು ಯಾವ ಕಾಲವಾಯಿತೊ ಗೊತ್ತಿಲ್ಲ.ಹೂಳು ತುಂಬಿದೆ,ಹಾಗಾಗಿ ಮಳೆ ನೀರು ಮುಂದೆ ಹೋಗದೆ ಅಲ್ಲೇ ನಿಂತು ಕೊಳೆತು ಗಬ್ಬು ವಾಸನೆ ಬರುತ್ತಿದೆ.

ಚರಂಡಿಯಲ್ಲಿ ನೀರು ನಿಂತಿರುವುದರಿಂದ ಹುಳು,ಹುಪ್ಪಟಿ ತುಂಬಿವೆ, ಜೊತೆಗೆ ಸೊಳ್ಳೆಗಳ ಕಾಟ ವಿಪರೀತವಾಗಿದೆ, ಹಾಗಾಗಿ ಹೊನ್ನಿಕುಪ್ಪೆ ಗ್ರಾಮದ ಜನ ಜ್ವರದಿಂದ ಬಳಲುತ್ತಿದ್ದಾರೆ. ಕೆಲವರು ಆಸ್ಪತ್ರೆಗೂ ದಾಖಲಾಗಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಆತಂಕ ವ್ಯಕ್ತಪಡಿಸಿದ್ದಾರೆ.
ಎಷ್ಟು ದಿನಗಳಿಂದ ಚರಂಡಿಯಲ್ಲಿ ನೀರು ತುಂಬಿಕೊಂಡು ಕಬ್ಬು ವಾಸನೆ ಬಂದು ಗ್ರಾಮದ ವಾತಾವರಣ ಹಾಳಾಗಿದ್ದರೂ ಗ್ರಾಮ ಪಂಚಾಯಿತಿ ಸದಸ್ಯರಾಗಲಿ ಅಧ್ಯಕ್ಷರಾಗಲಿ,ಪಿಡಿಒ ಆಗಲಿ ಯಾರೂ ಇತ್ತ ಗಮನ ಹರಿಸಿಲ್ಲ ಬಹಳ ಸಾರಿ ದೂರು ನೀಡಿದ್ದರೂ ಏನು ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯ ಜನರು ಮತ್ತು ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚರಂಡಿಯ ಕೆಟ್ಟವಾಸನೆ ತಡೆಯಲಾಗದೆ ಕೆಲವರಿಗೆ ಕಾಲರಾ ಕಾಡುತ್ತಿದೆ.ಜನ ಹೇಗೆ ಬದುಕಬೇಕು ಎಂದು ಪ್ರಶ್ನಿಸಿದ್ದಾರೆ.
ಉದ್ದೂರು ಕಾವಲ್ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ತಕ್ಷಣ ಗ್ರಾಮಕ್ಕೆ ಆಗಮಿಸಿ ಇಲ್ಲಿನ ಚರಂಡಿಗಳನ್ನು ಸ್ವಚ್ಛಪಡಿಸಲು ಕ್ರಮ ಕೈಗೊಳ್ಳಬೇಕು, ಹೂಳು ತೆಗೆಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕೆಂದು ಗ್ರಾಮಸ್ಥರ ಪರವಾಗಿ ಚಲುವರಾಜು ಒತ್ತಾಯಿಸಿದ್ದಾರೆ.
ದೂರು ಕೊಟ್ಟರೂ ಏನು ಕ್ರಮ ತೆಗೆದುಕೊಳ್ಳದ ಪಿಡಿಒ ಮೇಲೆ ಇ ಒ ಅವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.