ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಸಾಲದ ಸುಳಿಗೆ ತಳ್ಳುತ್ತಿದೆ;ಸಿಎಜಿ ಎಚ್ಚರಿಕೆ-ಅಶೋಕ್

Spread the love

ಬೆಂಗಳೂರು: ಸ್ವಯಂಘೋಷಿತ ಆರ್ಥಿಕ ತಜ್ಞ ಸಿಎಂ ಸಿದ್ದರಾಮಯ್ಯಅವರ ದುರಾಡಳಿತ ಮತ್ತು ತಪ್ಪು ಹಣಕಾಸಿನ ನಿರ್ವಹಣೆಯಿಂದ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಯಾವ ಅಧೋಗತಿಗೆ ತಲುಪುತ್ತಿದೆ ಎನ್ನುವುದನ್ನ ಮಹಾಲೇಖಪಾಲರ (ಸಿಎಜಿ) ವರದಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ ಎಂದು ಪ್ರತಿಪಕ್ಷ ನಾಯಕ‌ ಅಶೋಕ್ ಹೇಳಿದ್ದಾರೆ.

2022–23ರಲ್ಲಿ 46,623 ಕೋಟಿ ಇದ್ದ ವಿತ್ತೀಯ ಕೊರತೆ, 2023–24ರಲ್ಲಿ 65,522 ಕೋಟಿಗೆ ಏರಿದೆ. ಏರುತ್ತಿರುವ ಈ ವಿತ್ತೀಯ ಕೊರತೆಗೆ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಅವೈಜ್ಞಾನಿಕ ಗ್ಯಾರೆಂಟಿಗಳು ಕರ್ನಾಟಕವನ್ನು ಹೇಗೆ ದಿವಾಳಿತನದತ್ತ ತಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಅಶೋಕ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವು ಮಾರುಕಟ್ಟೆಯಿಂದ 63,000 ಕೋಟಿ ಸಾಲ ಪಡೆದಿದ್ದು, ಇದು ಕಳೆದ ವರ್ಷಕ್ಕಿಂತ 37,000 ಕೋಟಿ ಹೆಚ್ಚು. ಇದು ಮುಂದಿನ ತಲೆಮಾರಿನ ಮೇಲೆ ಭಾರಿ ಬಡ್ಡಿ ಹೊರೆ ಹಾಕುತ್ತದೆ ಎಂದು ಸಿಎಜಿ ವರದಿ ಎಚ್ಚರಿಕೆ ನೀಡಿದೆ.

ರಸ್ತೆ, ನೀರಾವರಿ, ಮೂಲಸೌಕರ್ಯ ಹೂಡಿಕೆಯಲ್ಲಿ 5,229 ಕೋಟಿ ಕಡಿತವಾಗಿದ್ದು, ಇದರಿಂದ ಅಪೂರ್ಣ ಯೋಜನೆಗಳು ಶೇ 68 ಏರಿಕೆ ಕಂಡಿವೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ರಾಜ್ಯದ ಭವಿಷ್ಯವೇ ಅಪಾಯದಲ್ಲಿದೆ ಎಂದು ಎಚ್ಚರಿಕೆ ನೀಡಿದೆ.

ಹಿಂದಿನ ಬಿಜೆಪಿ ಸರ್ಕಾರದ ಸಮರ್ಪಕ ಆಡಳಿತ ಮತ್ತು ಹಣಕಾಸಿನ ನಿರ್ವಹಣೆಯಿಂದ ಕೋವಿಡ್ ನಂತರ 2022–23ರಲ್ಲಿ ಚೇತರಿಸಿಕೊಂಡಿದ್ದ ಕರ್ನಾಟಕ, 2023–24ರಲ್ಲಿ ಮತ್ತೊಮ್ಮೆ 9,271 ಕೋಟಿ ಆದಾಯ ಕೊರತೆಯ ಸುಳಿಗೆ ಸಿಕ್ಕಿದೆ. ಇದು ಕಾಂಗ್ರೆಸ್‌ನ ಅವೈಜ್ಞಾನಿಕ ಗ್ಯಾರೆಂಟಿಗಳು ಮತ್ತು ಹಣಕಾಸಿನ ತಪ್ಪು ನಿರ್ವಹಣೆಯ ನೇರ ಪರಿಣಾಮ ಎಂದು ಅಶೋಕ್ ದೂರಿದ್ದಾರೆ.

ವಿತ್ತೀಯ ಕೊರತೆಯನ್ನು ತಕ್ಷಣ ನಿಯಂತ್ರಿಸದಿದ್ದರೆ, ರಾಜ್ಯದ ಆರ್ಥಿಕತೆ ಇನ್ನಷ್ಟು ಹಿಂದುಳಿಯುತ್ತದೆ, ಸಾಲದ ಒತ್ತಡ ಹೆಚ್ಚುತ್ತದೆ, ಅಭಿವೃದ್ಧಿ ಕುಸಿಯುತ್ತದೆ. ಇಂದಿನ ಗ್ಯಾರೆಂಟಿ ಯೋಜನೆಗಳು ಭವಿಷ್ಯದ ಕಗ್ಗತ್ತಲಿನ ಗ್ಯಾರೆಂಟಿ ಎಂದು ಸಿಎಜಿ ಎಚ್ಚರಿಸಿದೆ.

ಇದು ಸ್ವಯಂ ಘೋಷಿತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರ ಕಾರ್ಯವೈಖರಿ. ಕಾಂಗ್ರೆಸ್ ಸರ್ಕಾರದ ಕರ್ನಾಟಕ ಮಾಡೆಲ್.

ಕರ್ನಾಟಕ ಸರ್ಕಾರವು ಇಂದಿನ ಕ್ಷಣಿಕ ರಾಜಕೀಯ ಲಾಭಕ್ಕಾಗಿ, ನಾಳಿನ ಕರ್ನಾಟಕದ ಭವಿಷ್ಯ ಬಲಿ ಕೊಡುತ್ತಿದೆ.
ಇದೇ ವ್ಯವಸ್ಥೆ ಮುಂದುವರಿದರೆ ಕರ್ನಾಟಕ ಆರ್ಥಿಕ ದಿವಾಳಿತನದಿಂದ ಚೇತರಿಸಿಕೊಳ್ಳಲಾಗದ ಸಾಲದ ಸುಳಿಗೆ ಸಿಲುಕಿ ಅಭಿವೃದ್ಧಿ ಶೂನ್ಯತೆ ಎದುರಿಸುವುದು ಮಾತ್ರ ಗ್ಯಾರೆಂಟಿ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.