ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಆರ್ಥಿಕ ಸಮಸ್ಯೆ; ಪಿಯೂಷ್‌ ಗೋಯಲ್‌ ಗೆ ಮನವಿ

Spread the love

ಮೈಸೂರು: ದಶಕಗಳ ಕಾಲದಿಂದ ಕಾರ್ಯ ನಿರ್ವಹಿಸುತ್ತಿರುವ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಲು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಕಲ್ಪ ತೊಟ್ಟಿದ್ದಾರೆ.

ಕೊಡಗು ಕಾಫಿ ಸಹಕಾರ ಸಂಘ ಈಗ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದು, ಕೇಂದ್ರ ವಾಣಿಜ್ಯ ಸಚಿವಾಲಯ ಮತ್ತು ಹಣಕಾಸು ಸಚಿವಾಲಯ ಮಧ್ಯ ಪ್ರವೇಶಿಸಿ ಪರಿಹಾರ ದೊರಕಿಸಿಕೊಡಬೇಕು ಎಂದು ಯದುವೀರ್‌ ಒಡೆಯರ್‌ ಮನವಿ ಮಾಡಿದ್ದಾರೆ.

ಈ ಸಂಬಂಧ ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರನ್ನು ಭೇಟಿ ಮಾಡಿ ಯದುವೀರ್‌, ಮನವಿ ಸಲ್ಲಿಸಿ ಪರಿಹಾರ ದೊರಕಿಸಿಕೊಡಬೇಕೆಂದು ಕೋರಿದ್ದಾರೆ.

1956 ರಲ್ಲಿ ಸ್ಥಾಪನೆಯಾದ ಕಾಫಿ ಸಹಕಾರ ಸಂಘವು, ಕೊಡಗು, ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 10,000–12,000 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಿಗೆ ಸಾಕಷ್ಟು ಬೆಂಬಲ ಒದಗಿಸಿದೆ. ಸುಮಾರು 40,000 ಕುಟುಂಬಗಳಿಗೆ ಬೆನ್ನೆಲುಬಾಗಿದೆ. ಸಾವಿರಾರು ಎಸ್ಟೇಟ್ ಕಾರ್ಮಿಕರಿಗೆ ಉದ್ಯೋಗ ನೀಡಿದೆ. ಇಂಥ ಸಂಘ
ಮಾರುಕಟ್ಟೆ ಏರಿಳಿತಗಳು ಹಾಗೂ ಬಂಡವಾಳದ ಕೊರತೆಯಿಂದಾಗಿ, 1995-96 ರಲ್ಲಿ 6.85 ಕೋಟಿ ನಷ್ಟವನ್ನು ಅನುಭವಿಸಿತು ಎಂದು ತಿಳಿಸಲಾಗಿದೆ ಎಂದು ಸಂಸದರು ವಿವರಿಸಿದ್ದಾರೆ.

ಕಾಫಿ ಮಂಡಳಿಯು 12.9.2011 ರಂದು ನೀಡಿದ ತೀರ್ಪಿನ ಪ್ರಕಾರ, ಸೊಸೈಟಿಯು 1,55,28,034 ಬಡ್ಡಿ ಪಾವತಿಸಲು ಸೂಚಿಸಿತ್ತು. ನಂತರ ಕಾಫಿ ಮಂಡಳಿಯು 20.09.2015 ರಂದು ಪತ್ರ ಬರೆದು, ಅಸಲು ಪಾವತಿಸಿದರೆ ಬಡ್ಡಿಯನ್ನು ಮನ್ನಾ ಮಾಡುವ ಅವಕಾಶ ಒದಗಿಸಿತ್ತು. ಅದರನ್ವಯ ಸೊಸೈಟಿಯು 22.12.2015 ರಂದು 1,55,28,090 ರೂ ಪಾವತಿಸಿತು. ಆದರೆ 2017 ರಲ್ಲಿ ಕಾಫಿ ಮಂಡಳಿಯು 5,83,85,155 ಬಡ್ಡಿ ವಿಧಿಸಿ ಮತ್ತು ಹೆಚ್ಚಿನ ಮೊತ್ತದ ವೆಚ್ಚವನ್ನು ಪಾವತಿಸಲು ಪತ್ರ ಬರೆಯಿತು ಎಂದು ಕೇಂದ್ರ ಸಚಿವರಿಗೆ ವಸ್ತುಸ್ಥಿತಿ ತಿಳಿಸಲಾಗಿದೆ ಎಂದು ಯದುವೀರ್ ಸ್ಪಷ್ಟಪಡಿಸಿದ್ದಾರೆ.

ಸೊಸೈಟಿಯು ಈಗ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು,13.13 ಕೋಟಿ ನಷ್ಟ ಅನುಭವಿಸಿದೆ. ಈ ಸಂದರ್ಭದಲ್ಲಿ ಬಡ್ಡಿಯನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಬಡ್ಡಿ ಪಾವತಿಸಿದರೆ, ಸೊಸೈಟಿಯು ಆರ್ಥಿಕವಾಗಿ ದಿವಾಳಿಯಾಗಲಿದೆ. ಇದರಿಂದ ಸುಮಾರು ಒಂದು ಲಕ್ಷ ಜನರು ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದು ಯದುವೀರ್‌ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ವಾಣಿಜ್ಯ ಸಚಿವರು ಕೂಡಲೇ ಮಧ್ಯಪ್ರವೇಶಿಸಿ, ಸೊಸೈಟಿಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಸಂಸದರು ಹೇಳಿದ್ದಾರೆ.

ಈ ಸಂಬಂಧ ಹಣಕಾಸು ಸಚಿವಾಲಯ ಜೊತೆಗೆ ಸಮನ್ವಯ ಸಾಧಿಸಿ ಸಂಸ್ಥೆಗೆ ಸೂಕ್ತ ಪರಿಹಾರ ಹಾಗೂ ನೆರವು ನೀಡಬೇಕು ಎಂದು ಮನವಿ ಸಲ್ಲಿಸಲಾಯಿತು ಎಂದು ಯದುವೀರ್‌ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ಸಚಿವರು ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್‌ ಒಡೆಯರ್‌ ಮಾಹಿತಿ ನೀಡಿದ್ದಾರೆ.