ಮೈಸೂರು: ಮಹಿಳೆಗೆ ಸಿಗಬೇಕಾದ ಗೌರವ ಸಿಕ್ಕಾಗ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಣಿಶಾಸ್ತ್ರ ಸಹ ಪ್ರಾಧ್ಯಾಪಕಿ ಎಂ.ಸಿ.ಸುಧಾ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಗಣದಲ್ಲಿ ಆಯೋಜಿಸಿದ್ದ 79 ನೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ಅವರು,ಇಂದಿನ ಸಮಾಜ ಮಹಿಳೆಯರನ್ನು ಕಾಣುತ್ತಿರುವ ಬಗೆಯನ್ನು ಬದಲಿಸಿಕೊಳ್ಳುವಂತೆ ಸಲಹೆ ನೀಡಿದರು.
ಮಹಿಳೆಯರನ್ನು ಗೌರವಿಸುವ ಸಮಾಜ ನಮ್ಮದಾಗಬೇಕು. ಮಹಿಳೆಯರು ಮುಖ್ಯ ವಾಹಿನಿಯಲ್ಲಿ ಹೆಚ್ಚು ಅವಕಾಶ ಪಡೆದುಕೊಳ್ಳಬೇಕು. ಅಲ್ಲದೆ, ಮಹಿಳೆಯರ ಬಗ್ಗೆ ಗೌರವ ಬೆಳೆಸಿಕೊಳ್ಳ ಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ದೇಶ ಎಂದರೆ ಅನ್ಯರ ಕಪಿ ಮುಷ್ಟಿಯಿಂದ ಹೊರ ಬರುವುದಷ್ಟೇ ಅಲ್ಲ, ಬದಲಿಗೆ ಕಾನೂನು ಪಾಲನೆ ಮಾಡುವುದು, ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣಕ್ಕೆ ಪಣ ತೊಡುವುದು, ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬದುಕಿನಿಂದ ಪ್ರೇರೇಪಣೆ ಪಡೆದು ಮೌಲ್ಯಯುತ ಬದುಕನ್ನು ರೂಪಿಸಿಕೊಳ್ಳುವುದು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಎಂ ಅವರು ಮಾತನಾಡಿ, ಜಗತ್ತು ಆಧುನಿಕತೆ ಕಡೆಗೆ ವಾಲುತ್ತಿದೆ. ಆದರೆ, ಹಿಂದಿನ ದಿನಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟಗಾರರು ನಡೆಸಿದ ತ್ಯಾಗ ಮತ್ತು ಬಲಿದಾನಗಳನ್ನು ಮನಗಂಡು ಅವರ ಮೌಲ್ಯಗಳನ್ನು ಪಾಲಿಸಬೇಕು ಎಂದು ಹೇಳಿದರು.
ಸಸ್ಯಶಾಸ್ತ್ರ ಸಹ ಪ್ರಾಧ್ಯಾಪಕಿ ಕಿರಣ್ಮಯಿ ಪಿ ನಾಗವಂದ ಮಾತನಾಡಿದರು.
ಕಾರ್ಯಕ್ರಮವನ್ನು ಪ್ರಥಮ ಪದವಿ ವಿದ್ಯಾರ್ಥಿ ಡಿವೋನಾ, ನಿರೂಪಿಸಿದರೆ, ದ್ವಿತೀಯ ಪದವಿಯ ತೇಜಸ್ವಿನಿ ವಂದಿಸಿದರು. ತೃತೀಯ ಪದವಿಯ ಬೃಂದಾ ಎ ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್, ಎನ್.ಎಸ್.ಎಸ್.ಅಧಿಕಾರಿ ಡಾ. ಲಕ್ಷ್ಮಣ ಬಿ, ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಪ್ರತಿಮಾ ಕೆ.ಆರ್. ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು, ಅಧ್ಯಾಪಕರು, ಅಧ್ಯಾಪಕೇತರರು, ಎನ್.ಎಸ್.ಎಸ್, ಎನ್. ಸಿ .ಸಿ,ಕ್ರೀಡೆ, ರೇಂಜರ್ಸ್, ರೆಡ್ ಕ್ರಾಸ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ತರಗತಿ ಪ್ರತಿನಿಧಿಗಳು ಮತ್ತು
ವಿದ್ಯಾರ್ಥಿಗಳು ಹಾಜರಿದ್ದರು.