(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: 1949 ರ ಬುದ್ಧಗಯಾ ಟೆಂಪಲ್ ಕಾಯ್ದೆ ರದ್ದತಿ ಮತ್ತು ಬುದ್ದ ಗಯಾ ಮಹಾಭೋಧಿ -ಮಹಾವಿಹಾರ ಸಂಪೂರ್ಣ ಬೌದ್ಧರ ಆಡಳಿತಕ್ಕೆ ಒಳಪಡಿಸಲು ಒತ್ತಾಯಿಸಿ ದೇಶಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾದ್ಯಕ್ಷ ಹಾಗೂ ಎ.ಎಸ್.ಐ ಟ್ರಸ್ಟಿ ನ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು.
ಬುದ್ಧಗಯಾ ಮಹಾ ಬೋಧಿ ಮಹಾವಿಹಾರ ಮುಕ್ತಿ ಆಂದೋಲನ ಸಮಿತಿ ವತಿಯಿಂದ ದೇಶಾದ್ಯಂತ ಈ ಹೋರಾಟ ನಡೆಸಲಾಗುತ್ತಿದೆ ಎಂದು ಡಾ.ಎಂ.ವೆಂಕಟಸ್ವಾಮಿ ಹೇಳಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿ ಹೋರಾಟ ಜ್ಯೋತಿಗೆ ಚಾಲನೆ ನೀಡಿ ಮಾತನಾಡಿದ ಅವರು ಸಾಮ್ರಾಟ್ ಅಶೋಕ್ ಅವರು ಅಂದು ಸಂಸ್ಥಾಪಿಸಿದ ತಮ್ಮ ಸಾಮ್ರಾಜ್ಯದ ಉದ್ದಗಲಕ್ಕೂ 84.000 ಸ್ತೂಪಗಳ ಪೈಕಿ ಬುದ್ಧಗಯಾ ಮಹಾವಿಹಾರವು ಜಗತ್ ಪ್ರಸಿದ್ಧವಾಗಿದ್ದು ಜಗತ್ತಿನ ಸಮಸ್ತ ಬೌದ್ಧರಿಗೆ ಪವಿತ್ರ ಯಾತ್ರಾ ಸ್ಥಳವಾಗಿದೆ ಎಂದು ಹೇಳಿದರು.
ಸಾವಿರಾರು ವರ್ಷಗಳ ಕಾಲ ಬೌದ್ಧರ ಆಡಳಿತದಲ್ಲಿದ್ದ ಬುದ್ದಗಯಾದ ಮಹಾಬೋಧಿ ಮಹಾವಿಹಾರವು 1949ರ ನಂತರ ಅನ್ಯ ಧರ್ಮಿಯರ ಆಡಳಿತದ ಹಿಡಿತದಲ್ಲಿದೆ. ನಾಲ್ವರು ಹಿಂದೂಗಳು, ನಾಲ್ವರು ಬೌದ್ದರು ಮತ್ತು ಬುದ್ಧಗಯಾ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಆಡಳಿತ ಮಂಡಳಿಯು ರದ್ದಾಗಿ ಅದರ ಸದಸ್ಯರೆಲ್ಲರೂ ಬೌದ್ದರೇ ಆಗಬೇಕೆಂದರೆ 1949ರ ಜ.ಡಿ. ಕಾಯ್ದೆ ರದ್ದಾಗಬೇಕೆಂದು ಹತ್ತಾರು ದಶಕಗಳ ಹೋರಾಟವೇ ನಡೆದಿದೆ. ಆಯಾ ಕಾಲದಲ್ಲಿ ಹಲವು ದಾರ್ಶನಿಕರು ಈ ಹೋರಾಟವನ್ನು ಮುನ್ನಡೆಸಿದ್ದಾರೆ ಎಂದು ತಿಳಿಸಿದರು.
ಸರ್ ಇಲ್ಲಿನ್ ಅವರು ಬರೆದ ಲೈಟ್ ಆಫ್ ಏಶಿಯಾ ಪುಸ್ತಕ ಓದಿ ಶ್ರೀಲಂಕಾದ ಅನಾಗರಿಕ ಧಮ್ಮಪಾಲ್ ಅವರು ಬುದ್ಧಗಯಾಗೆ ಹೋಗಿ ಮೊಟ್ಟಮೊದಲ ಹೋರಾಟ ಆರಂಭಿಸಿದರು.
1991ರಲ್ಲಿ ಜಪಾನಿನ ಪೂಜ್ಯ ಬಿಕ್ಕು ಸುರೈಸಸಾಯಿ ಈ ಹೋರಾಟವನ್ನು ಮುಂದುವರೆಸಿದರು. ಇದೀಗ ಹಿಮಾಲಯ ಭಾಗದ ಧಮ್ಮ ನಾಯಕ ಡಾ.ಆಕಾಶ್ ಲಾಮಾ ಅವರ ನೇತೃತ್ವದಲ್ಲಿ ALL INDIA BUDDHISTS FORUM-AIBF ಸ್ಥಾಪಿಸಿ ಅದರ ಮೂಲಕ ಇಡೀ ದೇಶದಲ್ಲಿನ ಬೌದ್ಧರಲ್ಲಿ ಜಾಗೃತಿ ಮೂಡಿಸುವ ಹೋರಾಟವು ಬುದ್ದ ಗಯಾದಲ್ಲಿ ಪುನರಾರಂಭಗೊಂಡಿದೆ ಎಂದು ಮಾಹಿತಿ ನೀಡಿದರು.
ತೀವ್ರ ಚಳಿ, ಅತಿಯಾದ ಗಾಳಿ-ಮಳೆ, ಭೀಕರ ಬಿಸಿಲುಗಳ ಅವಘಡಗಳ ನಡುವೆಯೂ ಕಳೆದ ಫೆಬ್ರವರಿ 12 ರಿಂದ ಬುದ್ಧಗಯಾದಲ್ಲಿ ನಡೆದಿರುವ ಪೂಜ್ಯ ಭಿಕ್ಕುಗಳ ಈ ಧರಣಿ ಸತ್ಯಾಗ್ರಹವು ಆರಂಭವಾಗಿ ಇಂದಿಗೆ ನೂರಾರು ದಿನಗಳಾಗುತ್ತಿವೆ ಎಂದು ಡಾ.ವೆಂಕಟಸ್ವಾಮಿ ವಿವರಿಸಿದರು.
ಪೂಜ್ಯ ಬಿಕ್ಕು ಸಂಘದ ಧರಣಿ ಸತ್ಯಾಗ್ರಹವು ಇಂದಿಗೂ ಮುಂದುವರೆದಿದೆ. ಧರಣಿ ನಿರತ ಭಿಕ್ಕು ಸಂಘದ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ. ಅಲ್ಲಿನ ರಾಜ್ಯ ಸರ್ಕಾರ ಈ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನದಲ್ಲಿದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ಮೇಲೆ ಒತ್ತಡ ಹೇರುವ ಹೋರಾಟವು ಭಾರತದ ಎಲ್ಲಾ ಭಾಗಗಲ್ಲೂ ಏಕಕಾಲಕ್ಕೆ ಆರಂಭವಾಗಬೇಕೆಂದು ಎ.ಐ.ಜಿ.ಎಫ್ ಕರೆ ನೀಡಿದೆ. ಇದೇ ಜುಲೈ 25 ಮತ್ತು 26 ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ರಾಷ್ಟ್ರ ಮಟ್ಟದ ಧರಣಿ ಸತ್ಯಾಗ್ರಹ ನಡೆಯಿತು ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಆಗಸ್ಟ್ 11 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕದ ಮೈಸೂರು ವಿಭಾಗ, ಕಲಬುರಗಿ ವಿಭಾಗ, ಬೆಳಗಾವಿ ವಿಭಾಗೀಯ ಜಾಗೃತಿ ಸಭೆಗಳು ನಡೆದು ಇದೀಗ ರಾಜ್ಯ ಮಟ್ಟದ ಧರಣಿ ಸತ್ಯಾಗ್ರಹದ ಸಮಾವೇಶವ ನಡೆದಿದೆ. ಎ.ಐ.ಜಿ.ಎಫ್ ರಾಷ್ಟ್ರೀಯ ಕಾರ್ಯದರ್ಶಿ ಡಾ.ಪ್ರಕಾಶ್ ಲಾಮಾ ಮತ್ತು ರಾಷ್ಟ್ರೀಯ ಬೌದ್ಧ ನಾಯಕರು,ನಾಡಿನ ಸಮಸ್ತ ಬೌದ್ಧರು, ಅಭಿಮಾನಿಗಳು ಈ ರಾಜ್ಯ ಮಟ್ಟದ ಧರಣಿಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು.
ಈ ನಮ್ಮ ಹೋರಾಟದಿಂದ ಬೌದ್ಧರ ಆಡಳಿತ ಮಂಡಳಿಗೆ ಬುದ್ಧಗಯಾ ಮಹಾವಿಹಾರ ಸೇರಿದಂತೆ ದೇಶದಲ್ಲಿನ ಸಾವಿರಾರು ಬೌದ್ಧ ಸ್ಮಾರಕಗಳು ಬೌದ್ಧರ ಕೈಗೆ ಬರಲಿವೆ ಎಂದು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಎ.ಐ.ಬಿ.ಎಮ್ ಡಾ.ಆಕಾಶ್ ಲಾಮಾ, ಡಾಕ್ಟರ್ ಚಂದ್ರ ಮೋದಿ ಪಾಟೀಲ್, ಸಬೀನಾ ಲಾಮಾ ಸ್ಥಳೀಯ ಮುಖಂಡರುಗಳಾದ ಆರ್‌ಪಿಐ ಜಿಲ್ಲಾಧ್ಯಕ್ಷ ಸುರೇಶ್, ಮುರುಳಿ, ರಾಜೇಶ್ ಮತ್ತಿತರರು ಹಾಜರಿದ್ದರು.