ನವದೆಹಲಿ: ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್ ಕೊಲೆ ಪ್ರಕರಣದ ಆರೋಪಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ರದ್ದುಗೊಳಿಸಿದ್ದಲ್ಲದೆ ಒಂದು ವಾರದೊಳಗೆ ಶರಣಾಗುವಂತೆ ಸುಶೀಲ್ ಕುಮಾರ್ ಗೆ ತಾಕೀತು ಮಾಡಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
ಮಾರ್ಚ್ 4 ರಂದು ಸುಶೀಲ್ ಕುಮಾರ್‌ಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠ ರದ್ದುಗೊಳಿಸಿದೆ.
ಸುಶೀಲ್ ಕುಮಾರ್‌ಗೆ ನೀಡಿದ್ದ ಜಾಮೀನು ಪ್ರಶ್ನಿಸಿ ಸಾಗರ್ ಅವರ ತಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕರೋಲ್ ಮಾನ್ಯ ಮಾಡಿದ್ದಾರೆ.
2021 ಮೇ 4 ರಂದು ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್(27) ಮೃತಪಟ್ಟಿದ್ದರು.
ಈ ಪ್ರಕರಣದ ಸಂಬಂಧ ಸುಶೀಲ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಮೂರೂವರೆ ವರ್ಷಗಳ ಕಾಲ ಬಂಧನದಲ್ಲಿದ್ದ ನಂತರ ಈ ವರ್ಷದ ಮಾರ್ಚ್ನಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ವಿಚಾರಣೆ ಆರಂಭವಾದ ಮೂರು ವರ್ಷಗಳಲ್ಲಿ 186 ಪ್ರಾಸಿಕ್ಯೂಷನ್ ಸಾಕ್ಷಿಗಳಲ್ಲಿ ಕೇವಲ 30 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ ಎಂದು ಗಮನಿಸಿದ ದೆಹಲಿ ಹೈಕೋರ್ಟ್ ಸುಶೀಲ್ ಕುಮಾರ್‌ಗೆ ಜಾಮೀನು ನೀಡಿತ್ತು.
ಆದರೆ ಸುಶೀಲ್ ಕುಮಾರ್‌ಗೆ ನೀಡಿದ ಜಾಮೀನನ್ನು ಪ್ರಶ್ನಿಸಿ ಸಾಗರ್ ಧಂಕರ್ ತಂದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಶೀಲ್ ಕುಮಾರ್ ಮಧ್ಯಂತರ ಜಾಮೀನಿನ ಮೇಲೆ ಹೊರ ಬಂದಾಗ, ಅವರು ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದರು ಎಂದು ವಾದ ಮಂಡಿಸಲಾಯಿತು.
ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಸಾಗರ್ ಮೇಲೆ ಹಲ್ಲೆ: ಛತ್ರಸಾಲ್ ಕ್ರೀಡಾಂಗಣದ ಪಾರ್ಕಿಂಗ್ ಸ್ಥಳದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಧಂಕರ್ ಮತ್ತು ಅವರ ಇಬ್ಬರು ಸ್ನೇಹಿತರಾದ ಸೋನು ಮತ್ತು ಅಮಿತ್ ಕುಮಾರ್ ಮೇಲೆ ಸುಶೀಲ್ ಕುಮಾರ್ ಮತ್ತು ಸಹಚರರು ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿತ್ತು
