ಮೈಸೂರು: ತಾಮ್ರ ಹಿತ್ತಾಳೆ ಸ್ಕ್ರಾಪ್ ಮಾರಾಟದ ವ್ಯಾಪಾರಿಯನ್ನ ಚಾಕು ತೋರಿಸಿ ಕೊಲೆ ಬೆದರಿಸಿ 10 ಲಕ್ಷ ದೋಚಿರುವ ಘಟನೆ ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಜಯನಗರ ನಿವಾಸಿ ಅಬ್ದುಲ್ ಆಸಿಫ್ ಅವರಿಗೆ ದುಷ್ಕರ್ಮಿಗಳು ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾರೆ.
ಮೈಸೂರು ನಿವಾಸಿ ಅಫ್ಸರ್ ಖಾನ್ ಹಾಗೂ ಮೂವರು ಹಣ ಸುಲಿಗೆ ಮಾಡಿದ ಆರೋಪಿಗಳು.
ಅಬ್ದುಲ್ ಅವರು ಆಗಾಗ ಮೈಸೂರಿಗೆ ಬಂದು ಸ್ಕ್ರಾಪ್ ಐಟಂ ಖರೀದಿಸುತ್ತಾರೆ.
ಇತ್ತೀಚೆಗೆ 800 ಕೆಜಿ ಸ್ಕ್ರಾಪ್ ಇದೆ ಕೆಜಿ ಗೆ 1500 ರೂ ಎಂದು ಅಪ್ಸರ್ ಖಾನ್ ಆಮಿಷ ತೋರಿಸಿದ್ದಾನೆ.ಇದನ್ನ ನಂಬಿದ ಅಬ್ದುಲ್ ತನ್ನ ಸಂಬಂಧಿಕರಾದ ಮೊಕ್ತಿಯಾರ್ ಪಾಷಾ ಅವರನ್ನ ಜೊತೆಗೆ ಕರೆದುಕೊಂಡು ಓಮ್ನಿ ವ್ಯಾನ್ ನಲ್ಲಿ 10 ಲಕ್ಷ ಸಮೇತ ಮೈಸೂರಿಗೆ ಬಂದಿದ್ದಾರೆ.
ಮಣಿಪಾಲ್ ಜಂಕ್ಷನ್ ಬಳಿ ಬಂದು ಅಪ್ಸರ್ ಖಾನ್ ಗೆ ಬರುವಂತೆ ತಿಳಿಸಿದ್ದಾರೆ.ಸ್ಥಳಕ್ಕೆ ಬಂದ ಅಪ್ಸರ್ ಓಮ್ನಿ ಹತ್ತಿ ಜೆಕೆ ಟೈರ್ಸ್ ಕಡೆಗೆ ಕರೆದೊಯ್ದಿದ್ದಾನೆ.ರಸ್ತೆ ಮಧ್ಯೆ ಮುಕ್ತಿಯಾರ್ ಪಾಷಾ ರನ್ನ ಇಳಿಸಿ ಸ್ಕ್ರಾಪ್ ತೋರಿಸುವುದಾಗಿ ತಾನೇ ಓಮ್ನಿ ಚಾಲನೆ ಮಾಡಿದ್ದಾನೆ.
ಸ್ವಲ್ಪ ದೂರ ತೆರಳಿದ ನಂತರ ಕಾರನ್ನ ನಿಲ್ಲಿಸಿ ಹಾರನ್ ಮಾಡಿದಾಗ ಮೂವರು ವ್ಯಕ್ತಿಗಳು ಬಂದು ಕಾರನ್ನ ಸುತ್ತುವರೆದಿದ್ದಾರೆ.
ಬಲವಂತವಾಗಿ ಅಫ್ಸರ್ ಖಾನ್ ನ್ನು ಪಕ್ಕದ ಸೀಟ್ ಗೆ ತಳ್ಳಿ ಮೂವರ ಪೈಕಿ ಒಬ್ಬ ಕಾರನ್ನ ಓಡಿಸಿದ್ದಾನೆ.ಉಳಿದಿಬ್ಬರು ಅಬ್ದುಲ್ ಆಸಿಫ್ ಗೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ ಕ್ಯಾಶ್ ಬ್ಯಾಗ್ ಕಸಿದುಕೊಂಡಿದ್ದಾರೆ.
ಸ್ವಲ್ಪ ದೂರ ತೆರಳಿದ ನಂತರ ಕಾರನ್ನ ಬಿಟ್ಟು ಓಡಿದ್ದಾರೆ.ಅಪ್ಸರ್ ಖಾನ್ ಪ್ಲಾನ್ ಮಾಡಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿರುವುದಾಗಿ ಅಬ್ದುಲ್ ಆರೋಪಿಸಿದ್ದು ನಾಲ್ವರ ವಿರುದ್ದ ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.