ಪತ್ನಿ ಶೀಲ ಶಂಕಿಸಿ ಹತ್ಯೆ ಮಾಡಿದ್ದ ಪತಿಗೆಜೀವಾವಧಿ ಸೆರೆವಾಸ ವಿಧಿಸಿದ ಕೋರ್ಟ್

Spread the love

ಕೊಳ್ಳೇಗಾಲ: ಪತ್ನಿ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ ಮಾಡಿದ್ದ ಪತಿಗೆ ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಸೆರೆವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಪಟ್ಟಣದ ಮುಡಿಗುಂಡ ಬಡಾವಣೆ ನಿವಾಸಿ ಕೊಪ್ಪಳಿ ನಾಯಕ ಎಂಬುವರ ಮಗ ಕುಮಾರ್ (55) ಶಿಕ್ಷೆಗೆ ಒಳಗಾದ ವ್ಯಕ್ತಿ.

ಈತ 10 ವರ್ಷಗಳ ಹಿಂದೆ ಮುಳ್ಳೂರು ಗ್ರಾಮದ ಕಾಮರಾಜ ನಾಯಕನ ಮಗಳು ಚಿನ್ನಮ್ಮಳನ್ನು ಮದುವೆಯಾಗಿದ್ದ. ಕೆಲ ವರ್ಷಗಳ ನಂತರ ಪತ್ನಿಯ ಶೀಲ ಶಂಕಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ.

ಇದರಿಂದ ಬೇಸರಗೊಂಡ ಚಿನ್ನಮ್ಮ ತವರು ಮನೆ ಸೇರಿದ್ದಳು. ಈ ನಡುವೆ 2022 ಮಾ.31 ರಂದು ಕುಮಾರ್ ಮುಳ್ಳೂರು ಗ್ರಾಮಕ್ಕೆ ತೆರಳಿ ಯುಗಾದಿ ಹಬ್ಬ ಮಾಡೋಣ ಬಾ ಎಂದು ಹೇಳಿದ್ದಲ್ಲದೆ ಪತ್ನಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಚಿನ್ನಮ್ಮಳ ತಂದೆ ಕಾಮರಾಜ ನಾಯಕ ಮತ್ತು ತಾಯಿ ರಾಜಮ್ಮ ಅವರಿಗೆ ಭರವಸೆ ನೀಡಿ ಮುಡಿಗುಂಡದ ಮನೆಗೆ ಕರೆ ತಂದಿದ್ದ.

ಆದರೂ ತನ್ನ ಚಾಳಿ ಬಿಡದ ಕುಮಾರ್, 2022 ಏ.1 ರಂದು ಬೆಳಗಿನ ಜಾವ 4.15 ರಲ್ಲಿ ಗಲಾಟೆ ಮಾಡಿ ಚಿನ್ನಮ್ಮಳ ಕಪಾಳಕ್ಕೆ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದ. ಈ ದೃಶ್ಯ ನೋಡಿ ಕೂಗಿಕೊಂಡ ಮಗ ದರ್ಶನ್ ನನ್ನು ಕೊಠಡಿಗೆ ಕೂಡಿ ಹಾಕಿದ್ದನು.

ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಅಂದಿನ ಸಿಪಿಐ ಶಿವರಾಜ್ ಆರ್.ಮುಧೋಳ್ ಪ್ರಕರಣದ ಕುರಿತು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ಸಿ.ಶ್ರೀಕಾಂತ್ ಅವರು, ಕುಮಾರ್ ಮಾಡಿ ರುವ ಅಪರಾಧಗಳು ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಸೆರೆವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಅಲ್ಲದೆ, ಕುಮಾರ್ ಪುತ್ರ ದರ್ಶನ್ ಮೈನ‌ರ್ ಆಗಿದ್ದು, ಆತನ ಪೋಷಣೆಗೆ ಕಾನೂನು ಸೇವಾ ಪ್ರಾಧಿಕಾರ ದಿಂದ ಸೂಕ್ತ ಪರಿಹಾರಕ್ಕೆ ಆದೇಶಿಸಿದ್ದಾರೆ.

ಈ ಪ್ರಕರಣ ಕುರಿತು ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ, ಸಿ.ಬಿ.ಗಿರೀಶ್ ಅವರು ವಾದ ಮಂಡಿಸಿದ್ದರು.