ಉದ್ಘಾಟನೆ ಭಾಗ್ಯ ಕಾಣದಹುಣಸೂರು ಹೈಟೆಕ್ ನೂತನ ಆಸ್ಪತ್ರೆ

ಹುಣಸೂರು: ಹುಣಸೂರು ತಾಲೂಕು ಸುಮಾರು 330ಕ್ಕೂ ಹೆಚ್ಚು ಗ್ರಾಮಗಳನ್ನು ಹೊಂದಿದ್ದು ಯಾರಿಗೇ ಆರೋಗ್ಯ ಹದಗೆಟ್ಟರೂ ಹಿಂದೆ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರು ಕಟ್ಟಿಸಿದ ಆಸ್ಪತ್ರೆಯೇ ಆಸರೆಯಾಗಿದೆ.

ಈ ಆಸ್ಪತ್ರೆ ಹಳೆಯದಾಗಿದೆ ಆದರೂ ಅತ್ಯುತ್ತಮ ವೈದ್ಯರು, ನರ್ಸ್ ಗಳು ಇದ್ದಾರೆ ಹಾಗಾಗಿ ಪ್ರತಿದಿನ ನೂರಾರು ರೋಗಿಗಳು ಎಲ್ಲಿಗೆ ಬರುತ್ತಲೇ ಇರುತ್ತಾರೆ.

ಈ ಆಸ್ಪತ್ರೆ ಅತಿ ಚಿಕ್ಕದಾಗಿದ್ದು ರೋಗಿಗಳು ಓಡಾಡಲು ತೊಂದರೆ ಆಗುತ್ತಿದೆ. ಅದನ್ನು ಮನಗಂಡು ದೇವರಾಜ ಅರಸು ಭವನದ ಸಮೀಪದಲ್ಲಿ ಅತ್ಯುತ್ತಮವಾದ ಹೈಟೆಕ್ ಆಸ್ಪತ್ರೆಯನ್ನು ಜನರ ಉಪಯೋಗಕ್ಕಾಗಿ ಸರ್ಕಾರದ ನೆರವಿನಲ್ಲಿ ನಿರ್ಮಿಸಲಾಗಿದೆ.

2022ರಲ್ಲಿ ಈ ಆಸ್ಪತ್ರೆ ನಿರ್ಮಾಣ ಪೂರ್ಣಗೊಂಡಿದ್ದರೂ ಇದುವರೆಗೂ ಉದ್ಘಾಟನೆ ಭಾಗ್ಯವನ್ನು ಕಂಡಿಲ್ಲ.

ಇದಕ್ಕೆ ಕಾರಣ ಏನು ಎಂಬುದು ಯಾರಿಗೂ ಗೊತ್ತಿಲ್ಲ,ಪ್ರತೀದಿನ ಬಹಳಷ್ಟು ರೋಗಿಗಳು ಬರುವುದರಿಂದ ಎಲ್ಲ ರೋಗಿಗಳಿಗೂ ಉತ್ತಮ ಸೌಲಭ್ಯ ಸಿಗುವುದು ಸಾಧ್ಯವಾಗುತ್ತಿಲ್ಲ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು,ಹುಣಸೂರು ಜನಪ್ರತಿ‌ನಿಧಿಗಳು ಮತ್ತು ಸರ್ಕಾರ ಇತ್ತ ಗಮನ ಹರಿಸಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ‌ ಹುಣಸೂರು ತಾಲೂಕು ಅಧ್ಯಕ್ಷ‌ ಚಲುವರಾಜು ಒತ್ತಾಯಿಸಿದ್ದಾರೆ.

ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸಾವರ್ಜನಿಕರ ಉಪಯೋಗಕ್ಕೆಂದೇ ನಿರ್ಮಾಣವಾಗಿರುವ ಈ ನೂತನ ಆಸ್ಪತ್ರೆಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ.

ಜನರ ತೆರಿಗೆ ಹಣ ಈ ರೀತಿಯಲ್ಲಿ ಪೋಲು ಮಾಡುತ್ತಿದ್ದಾರೆ.ಉದ್ಘಟನೆಯಾಗದೆ ಜನರಿಗೆ ಉಪಯೋಗದೆ ಕಟ್ಟಡ ಪಾಳು ಬೀಳುತ್ತಿದೆ,ಆಸ್ಪತ್ರೆ‌ಯ ಸುತ್ತ ಗಿಡಗಂಟಿ ಬೆಳೆಯುತ್ತಿದೆ ಯಾರೂ ಕೇಳುವವರೇ ಇಲ್ಲದಂತಾಗಿದೆ‌ ಎಂದು ಚಲುವರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟವೊ ಅಥವಾ ಹಾಲಿ,ಮಾಜಿ ಶಾಸಕರ ತುಮುಲವೊ ಅಂತೂ ಗಂಡ ಹೆಂಡತಿ ನಡುವಿನ ಜಗಳದಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿನಂತೆ ಹುಣಸೂರು ಸಾರ್ವಜನಿಕ ಆಸ್ಪತ್ರೆಯ ಕತೆಯಾಗಿದೆ.ಇದನ್ನು ಹೀಗೇ ಬಿಟ್ಟರೆ ಕೋಟ್ಯಂತರ ರೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.

ಇನ್ನಾದರೂ ಈ ಹೊಸ ಆಸ್ಪತ್ರೆ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಬರುವುದೆ,ಜನತೆಗೆ ಉತ್ತಮ ಆರೋಗ್ಯ ಭಾಗ್ಯ ಸಿಕ್ಕೀತೆ ಕಾದುನೋಡಬೇಕಿದೆ.