ಸೋಷಿಯಲ್ ಮೀಡಿಯಾದಲ್ಲಿನ ಕಮೆಂಟ್ ನಿರ್ಲಕ್ಷಿಸುವುದು ಒಳಿತು-ಯದುವೀರ್

Spread the love

ಮೈಸೂರು: ಸೋಷಿಯಲ್ ಮೀಡಿಯಾದಲ್ಲಿ ಎಲ್ಲೋ ಕುಳಿತುಕೊಂಡು ಕಮೆಂಟ್ ಹಾಕುತ್ತಾರೆ, ಅಂತವರಿಗೆ ಏನು ಮಾಡೋಕಾಗಲ್ಲ,ಹಾಗಾಗಿ ನಾವು ನಮ್ಮ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಯೋಜನಯಡಿ 193 ಕೋಟಿ ವೆಚ್ಚದಲ್ಲಿ ಮೈಸೂರು ವಸ್ತುಪ್ರದರ್ಶನ ಆವರಣದಲ್ಲಿ ಯುನಿಟಿ ಮಾಲ್ ನಿರ್ಮಾಣಗೊಳ್ಳುತ್ತಿದ್ದು, ಸಂಸದ ಯದುವೀರ್ ಶಾಸಕ ಟಿ.ಎಸ್.ಶ್ರೀವತ್ಸ ಅವರೊಂದಿಗೆ ಸ್ಥಳ ಪರಿಶೀಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಗೆ ದರ್ಶನ್ ಅಭಿಮಾನಿಗಳು ಧಮ್ಕಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಅಂತಹ ಟೀಕೆಗಳನ್ನು ಅನುಭವಿಸಿದ್ದೇನೆ ಎಂದು ತಿಳಿಸಿದರು.

ಎಲ್ಲೋ ಕುಳಿತುಕೊಂಡು ಕಮೆಂಟ್ ಹಾಕುತ್ತಾರೆ,ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು,ನಮ್ಮ ಕೆಲಸ ಮಾಡಿಕೊಂಡು ಹೋಗಬೇಕಷ್ಟೆ ಎಂದರು.

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ವಿಚಾರಣೆ ಮಾಡುತ್ತಿದೆ, ತೀರ್ಪು ಬರುವ ತನಕ ನಾವು ಯಾರೂ ಅದಕ್ಕೆ ಪ್ರತಿಕ್ರಿಯೆ ನೀಡಬಾರದು ಎಂದು ಸಂಸದರು ಹೇಳಿದರು.

ಸೋಷಿಯಲ್ ಮೀಡಿಯಾದಲ್ಲಿನ ಕಾಮೆಂಟ್ ಗಳನ್ನ ನಿರ್ಲಕ್ಷ ಮಾಡಬೇಕಷ್ಟೆ ಎಂದು ತಿಳಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಸಿಎಂ ಸಿದ್ದರಾಮಯ್ಯ ಹೋಲಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯದುವೀರ್, ನಾಯಕತ್ವ ಇರೋದು ಕೆಲಸ ಮಾಡೋಕೆ ಹೋಲಿಕೆ ಮಾಡೋಕಲ್ಲ ಎಂದು ಕಾಂಗ್ರೆಸಿಗರಿಗೆ ಟಾಂಗ್ ನೀಡಿದರು.

ನಾನು ಸಂಸದನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ನನ್ನ ಹಿಂದಿನವರು ಏನು ಮಾಡಿದರು ಅದನ್ನು ನಾನು ಹೋಲಿಕೆ ಮಾಡಲ್ಲ. ನನ್ನ ಆಲೋಚನೆಗಳ ಪ್ರಕಾರ ಕೆಲಸ ಮಾಡುತ್ತಿದ್ದೇನೆ. ಸರ್ಕಾರದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಯತೀಂದ್ರ ಅವರ ಹೇಳಿಕೆ ಖಂಡಿಸಿ ಪ್ರತಿಭಟನೆಗಳು ಆಗುತ್ತಿವೆ, ಕ್ಷಮೆ ಕೇಳುವಂತೆ ಆಗ್ರಹ ವ್ಯಕ್ತವಾಗುತ್ತಿದೆ. ಕ್ಷಮೆ ಕೇಳೋದು ಬಿಡೋದು ಅವರಿಗೆ ಬಿಟ್ಟಿದ್ದು. ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರೇ ಉತ್ತರ ಕೊಡುತ್ತಾರೆ ಎಂದು ಯದುವೀರ್ ಹೇಳಿದರು.

ಮೈಸೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ ಹಿನ್ನಲೆ, ಇದೊಂದು ಒಳ್ಳೆಯ ಕಾರ್ಯಾಚರಣೆ. ಡ್ರಗ್ಸ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು, ಇದನ್ನು ಗಂಭೀರವಾಗಿ ಪರಿಗಣಿಸಬೇಕು,ಈ ಬಗ್ಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇವೆ, ಪೊಲೀಸರು ಕೂಡ ಇನ್ನೂ ಹೆಚ್ಚಿನದಾಗಿ ಕೆಲಸ ಮಾಡಬೇಕು. ಡ್ರಗ್ಸ್ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಯದುವೀರ್ ತಿಳಿಸಿದರು.

ಮೈಸೂರಿನ ವಸ್ತುಪ್ರದರ್ಶನದ ಆವರಣದಲ್ಲಿ ನಿರ್ಮಾಣ ಗೊಳ್ಳುವ ಮಾಲ್ ನಲ್ಲಿ 99 ಮಳಿಗೆಗಳು ಇರುತ್ತದೆ. ಮೈಸೂರಿನ ಪರಂಪರೆ ಸಾರುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಮೈಸೂರಿನ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಎಲ್ಲಾ ರೀತಿಯ ಅಂಗಡಿಗಳನ್ನು ಕೂಡ ಇಲ್ಲಿ ತೆರೆಯಲು ನಿರ್ಧಾರ ಮಾಡಲಾಗಿದೆ ಎಂದು ವಿವರಿಸಿದರು.