ಕೊಳ್ಳೇಗಾಲದಲ್ಲಿ ಪತ್ರಿಕಾ ದಿನಾಚರಣೆ ಯಶಸ್ವಿ

Spread the love

ಕೊಳ್ಳೇಗಾಲ: ಕೊಳ್ಳೇಗಾಲ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ತಾ.ಪಂ.ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಡಿ.ಸಿದ್ದರಾಜು ಅವರ ಅಧ್ಯಕ್ಷ ತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕರು ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಕ್ಷೇತ್ರವನ್ನು ಸಾರ್ವಜನಿಕರು ಹೆಚ್ಚು ಅವಲಂಬಿಸಿದ್ದಾರೆ. ಅದಕ್ಕೆ ತಕ್ಕಂತೆ ಪತ್ರಿಕೋದ್ಯಮ ಅತಿ ವೇಗವಾಗಿ ಜನರನ್ನು ಆಕರ್ಷಿಸಿ ಸುದ್ದಿ ಪ್ರಚಾರದಲ್ಲಿ ದಾಪುಗಾಲಿಟ್ಟಿದೆ. ಈ ನಡುವೆ ಎಲ್ಲೆಡೆ ಪತ್ರಿಕಾ ದಿನಾಚರಣೆಯನ್ನು ಪತ್ರಕರ್ತರು ಸಡಗರ ಸಂಭ್ರಮದಿಂದ ಆಚರಿಸುತ್ತಿರುವುದು ಹರ್ಷ ತಂದಿದೆ ಎಂದು ಹೇಳಿದರು.

ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸದಲ್ಲಿ ತಮ್ಮ ಜೀವನವನ್ನು ಸವೆಸುತ್ತಾರೆ. ಅದಕ್ಕಾಗಿಯೇ ಅವರಿಗೆ ಇತರ ಕ್ಷೇತ್ರಗಳಲ್ಲಿರುವವರು ಕೂಡ ಹೆಚ್ಚು ಗೌರವ ನೀಡುತ್ತಾರೆ.

ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಕ್ಷೇತ್ರಕ್ಕಿಂತಲೂ ಪತ್ರಿಕಾ ರಂಗಕ್ಕೆ ಹೆಚ್ಚು ಶಕ್ತಿಯಿದೆ. ಇದನ್ನು ನಿರೂಪಿಸಿರುವ ಹಿರಿಯ ಪತ್ರಕರ್ತರ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಕಿರಿಯ ಪತ್ರಕರ್ತರು ಸಾಗಬೇಕು. ಮೌಲ್ಯಾಧರಿತ ವೃತ್ತಿಯಲ್ಲಿ ತೊಡಗಿ ಜನರಿಗೆ ಸತ್ಯ ಸುದ್ದಿ ಸಮಾಚಾರಗಳನ್ನು ಕೊಡಬೇಕು. ಗಾಳಿ ಸುದ್ದಿಗಳಿಗೆ ಬೆಲೆ ನೀಡದೆ ಮಾಧ್ಯಮ ಕ್ಷೇತ್ರಕ್ಕೆ ಇನ್ನಷ್ಟು ಗೌರವ ತಂದುಕೊಡಬೇಕು ಎಂದು ಕಿವಿ ಮಾತು ಹೇಳಿದರು.

ಭವನ ನಿರ್ಮಾಣಕ್ಕೆ ಪೂರ್ಣ ಅನುಧಾನ:
ಕೊಳ್ಳೇಗಾಲ ಪಟ್ಟಣದಲ್ಲಿ ಪತ್ರಕರ್ತರ ಭವನ ನಿಮಾರ್ಣಕ್ಕಾಗಿ ಮಾಜಿ ಸಂಸದ ದಿ.ವಿ.ಶ್ರೀನಿವಾಸಪ್ರಸಾದ್ ಹಾಗೂ ಮಾಜಿ ಶಾಸಕ ಎನ್.ಮಹೇಶ್ ಅವರು ತಲಾ 5 ಲಕ್ಷ ಅನುದಾನವನ್ನು ನೀಡಿ ಬೇಸ್ ಮೆಟ್ ಕಟ್ಟಡ ನಿರ್ಮಿಸಲು ಸಹಕಾರಿಯಾಗಿದ್ದಾರೆ ಎಂದು ಶಾಸಕ ಎ.ಆರ್.ಕೆ ಸ್ಮರಿಸಿದರು.

ಈಗ‌ ನನ್ನ ಸರದಿ ಬಂದಿದ್ದು, ಮುಂದುವರೆದ ಕಾಮಗಾರಿಗೆ ತಗಲುವ ವೆಚ್ಚದ ಬಗ್ಗೆ ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಿ, ರಾಜ್ಯ ಸರ್ಕಾರದಿಂದ ನನಗೆ ದೊರೆಯುವ ಅನುಧಾನ ಲಭ್ಯತೆ ಆಧರಿಸಿ ಪೂರ್ಣ ಪ್ರಮಾಣದಲ್ಲಿ ಕಟ್ಟಡ ನಿರ್ಮಿಸಿ ಲೋಕಾರ್ಪಣೆ ಮಾಡುವುದಾಗಿ ಭರವಸೆ ನೀಡಿದರು.  

ಸರ್ಕಾರದ ಸವಲತ್ತನ್ನು ಬಳಸಿಕೊಳ್ಳಿ:
ಪತ್ರಕರ್ತರು ಸಮಾಜದ ಎಲ್ಲಾ ಸಮಸ್ಯೆಗಳಿಗೆ ದಾರಿ ತೋರಿಸುವುದಲ್ಲಿ ತಮ್ಮ ಆರೋಗ್ಯದ ಕಡೆ ಗಮನ ನೀಡುವುದಿಲ್ಲ ಎಂದು ಶಾಸಕ ಎ.ಆರ್.ಕೆ ಅಭಿಪ್ರಾಯ ಪಟ್ಟರು.

ಇದನ್ನು ಅರಿತಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು, ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಪತ್ರಕರ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಧ್ಯಮ ಸಂಜೀವಿನಿ ಎಂಬ ಯೋಜನೆಯನ್ನು ತಂದಿದ್ದು, ಇದು ಜು.1 ರಿಂದ ರಾಜ್ಯದಲ್ಲಿ ಜಾರಿಯಾಗಿದೆ. ಈ ಸೌಲಭ್ಯ ಸೇರಿದಂತೆ ಉಚಿತ ಬಸ್ ಪಾಸ್ ಯೋಜನೆ ಹಾಗೂ ಸರ್ಕಾರದಿಂದ ದೊರೆಯುವ ಇತರ ಸವಲತ್ತುಗಳನ್ನು ಪತ್ರಕರ್ತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷ್ಣಮೂರ್ತಿ ಸಲಹೆ ನೀಡಿದರು.

ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್ ಮಾತನಾಡಿ, ಕೊಳ್ಳೇಗಾಲ ತಾ.ಪಂ ಇಒ ಆಗಿ ಕರ್ತವ್ಯ ನಿರ್ವಹಿಸಿದ ದಿನದಿಂದಲೂ ನಾನು ಕೊಳ್ಳೇಗಾಲದ ಪತ್ರಕರ್ತರ ಕಾರ್ಯ ವೈಖರಿಯನ್ನು ನೋಡಿದ್ದೇನೆ. ಸುದ್ದಿ ಬಿತ್ತರಿಸುವ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾರರು. ಹೆಚ್ಚು ಮೌಲ್ಯಾಧಾರಿತ ಸುದ್ದಿಗಳನ್ನು ಜನರಿಗೆ ಮುಟ್ಟಿಸುವಲ್ಲಿ ಮುಂದಿದ್ದಾರೆ. ನನ್ನ ವಿದ್ಯಾಬ್ಯಾಸ ಕಾಲದಿಂದ ಆರಂಭಗೊಂಡ ಪತ್ರಿಕೆ ಓದುವ ಅಭ್ಯಾಸ ಇಂದು ಅಧಿಕಾರಿಯಾಗಿದ್ದರೂ ಬಿಡಲಾಗುತ್ತಿಲ್ಲ. ಕಾರಣ, ದಿನ ಪತ್ರಿಕೆಗಳು ಭಾಷಾ ಹಿಡಿತ, ವ್ಯಕ್ತಿಯ ಸಾಮರ್ಥ್ಯ, ಸಾಹಿತ್ಯಭ್ಯಾಸವನ್ನು ನೀಡುವುದಲ್ಲದೇ ಅತ್ಯದ್ಭುತ ಜ್ಞಾನವನ್ನು ಕೊಡುತ್ತದೆ ಎಂದು ಬಣ್ಣಿಸಿದರು.

ಮೌಲ್ಯಾಧಾರಿತ ಪತ್ರಕರ್ತರ ಸಂಖ್ಯೆ ಕ್ಷೀಣ:
ಚಾ.ನಗರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದೇವರಾಜ್ ಕಪ್ಪಸೋಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೌಲ್ಯಾಧಾರಿತ ಪತ್ರಕರ್ತರ ಸಂಖ್ಯೆ ಕ್ಷೀಣಿಸುತ್ತಿದೆ. ಇದಕ್ಕೆ ಕಾರಣ ಪತ್ರಿಕೋಧ್ಯಮದ ದೇಯ್ಯೋದ್ದೇಶವನ್ನು ಹೆಚ್ಚು ಅರಿಯದಿರುವುದು ಎಂದು ಅಭಿಪ್ರಾಯಪಟ್ಟರು.

ವೃತ್ತಿ ನಿರತ ಪತ್ರಕರ್ತ ಸಮಾಜದಲ್ಲಿ ತನಗೆ ದೊರೆಯುವ ಗೌರವದ ತೃಪ್ತಿಯಿಂದಲೇ ಬದುಕುತ್ತಾರೆ. ಅಂತಹ ಪ್ರಾಮಾಣಿಕ ಪತ್ರಕರ್ತರು ಎಂದೆಂದು ಜನರ ಮನದಲ್ಲಿ ಉಳಿಯುತ್ತಾರೆ. ಏತನ್ಮಧ್ಯೆ, ಪತ್ರಕರ್ತರನ್ನು ಸಬಲಿಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶ್ರಮಿಸುತ್ತಿದೆ. ಪತ್ರಕರ್ತರಿಗೆ ದೊರೆಯಬೇಕಾದ ನಿವೇಶನ, ವಸತಿ, ಆರೋಗ್ಯ ಸೇರಿದಂತೆ ಮೂಲ ಸೌಕರ್ಯವನ್ನು ಧಕ್ಕಿಸುವ ನಿಟ್ಟಿನಲ್ಲಿ ಸತತ ಪ್ರಯತ್ನದಲ್ಲಿದೆ. ಇದರಡಿಯಲ್ಲಿ ಜಿಲ್ಲಾ ಸಂಘಗಳು ಅವಿತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಗೂಳಿಪುರ ನಂದೀಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಸಿದ್ದರಾಜು ಮಾತನಾಡಿದರು.

ವೇದಿಕೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಡಿ.ನಟರಾಜು, ಜಿಲ್ಲಾ ನಿರ್ದೇಶಕ ಎನ್.ರಾಜೇಶ್ ಉಪಸ್ಥಿತರಿದ್ದರು.

ತಾಲೂಕು ಸಂಘದ ಉಪಾಧ್ಯಕ್ಷ ಎಂ.ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಪವನ್ ಕುಮಾರ್, ಕಾರ್ಯದರ್ಶಿ ಎಂ.ಪಿ.ಮಹೇಶ್ ಸೇರಿದಂತೆ ಸಂಘದ ನಿರ್ದೇಶಕರಾದ ಎಸ್.ರಾಜಶೇಖರ್, ಎಸ್.ರಾಜು, ಚಂದ್ರಶೇಖರ್, ಅವೀನ್ ಪ್ರಕಾಶ್, ಪ್ರೇಮ್ ಸಾಗರ್, ಸಾಗರ್ ,ವಸಂತ್ ಕುಮಾರ್ .ಬಸಂತ್ ಮಲ್ಲಪ್ಪ.ಸುನಿಲ್, ಸಾಮ್.ಮಹೇಶ್. ಲಿಂಗರಾಜ್.ಚಂದ್ರು. ಹಾಗೂ ಇತರ ಪತ್ರಕರ್ತರು ಹಾಜರಿದ್ದರು.

ಇದೇ ವೇಳೆ ಕೊಳ್ಳೇಗಾಲ ತಾಲೂಕಿನ ಪತ್ರಕರ್ತರಾದ ಚಿಕ್ಕಮಾಳಿಗೆ, ಎನ್.ನಟರಾಜು, ಪಿ.ಜಗದೀಶ್ ಅವರನ್ನು ಸಂಘದಿಂದ ವಾರ್ಷಿಕ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಕುಂತೂರು ಮೊಳೆ ರಾಜೇಂದ್ರ ನಟರಾಜ್ ಮಾಳಿಗೆ. ಚೇತನ್ ದೊರೆ.ಶೇಖರ್ ಬುದ್ಧ,ಹರ್ಷ ಮತ್ತಿತರತ ಪ್ರಮುಖ ಮುಖಂಡರು ಹಾಜರಿದ್ದರು.