ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ

Spread the love

ಮೈಸೂರು: ಶ್ರೀಮನ್ಮಹಾರಾಜ ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಭುಗಳಿಗೆ ತನ್ನ ತಂದೆಯನ್ನು ಹೋಲಿಸಿ ಮಾತನಾಡಿರುವ ಎಂ‌ ಎಲ್‌ ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ವಿರೋಧಿಸಿ ಹಳೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ಸೇನಾಪಡೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಾಲ್ವಡಿಯವರ ಇತಿಹಾಸ ತಿಳಿಯದ ಡಾ. ಯತೀಂದ್ರ ಅವರ ಮಾತು ಕೇಳಿದರೆ ನಗು ಬರುತ್ತದೆ. ನಾಲ್ವಡಿ ಅವರಿಗಿಂತ ಮೈಸೂರಿಗೆ ತಮ್ಮಪ್ಪನದೇ ಜಾಸ್ತಿ ಕೊಡುಗೆ ಎಂದು ಹೇಳಿರುವುದು ಖಂಡನೀಯ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಯತೀಂದ್ರ ಅವರಿಗೆ ಬಹುಶಃ ನಾಲ್ವಡಿ ಅವರು ನಮ್ಮ ರಾಜ್ಯಕ್ಕೆ ನೀಡಿರುವ ನೂರಾರು ಕೊಡುಗೆಗಳು ತಿಳಿದಿಲ್ಲ. ಶಿಕ್ಷಣ, ನೀರಾವರಿ, ಕೈಗಾರಿಕೆ, ಕಾರ್ಖಾನೆಗಳು, ಪ್ರಜೆಗಳಿಗೆ ಸಾಮಾಜಿಕ ನ್ಯಾಯ ನೀಡಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ನಾಲ್ವಡಿರವರು ರಾಜ್ಯಕ್ಕೆ ನೀಡದ ಕೊಡುಗೆಗಳಿಲ್ಲ ಇದನ್ನೆಲ್ಲ ತಿಳಿದುಕೊಂಡು ಮಾತನಾಡಲಿ ಎಂದು ತಾಕೀತು ಮಾಡಿದರು.

ನೂರಾರು ಜನ್ಮ ಎತ್ತಿದರೂ, ಯಾರೂ ನಾಲ್ವಡಿಯವರ ಕಾಲಿನ ಧೂಳಿಗೂ ಸಮನಾಗುವುದಿಲ್ಲ. ಅಂದು ದೂರ ದೃಷ್ಟಿಯ ಆಡಳಿತದಿಂದ ಅಕ್ಷರಶಃ ಸುವರ್ಣ ಯುಗವನ್ನು ಸೃಷ್ಟಿಸಿದ್ದರು. ನಾಲ್ವಡಿ ಭೂಪ- ಮನೆಮನೆ ದೀಪ ಎಂದು ಇಂದಿಗೂ ಕನ್ನಡಿಗರು ನೆನೆದುಕೊಳ್ಳುವ ಅಭಿವೃದ್ಧಿಯ ಹರಿಕಾರರಾದ ನಾಲ್ವಡಿ ಮಹಾರಾಜರೆಲ್ಲಿ, ಪ್ರತಿ ಕನ್ನಡಿಗರ ಮೇಲೆ ಸಾಲದ ಹೊರೆ ಹೊರೆಸಿರುವ ಹಾಗೂ ಎಲ್ಲಾ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಸಿದ್ದರಾಮಯ್ಯರವರೆಲ್ಲಿ ಎಂದು ಕರ್ನಾಟಕ ಸೇನಾಪಡೆಯ ಸದಸ್ಯರು ಪ್ರಶ್ನಿಸಿದರು.

ಸಿದ್ದರಾಮಯ್ಯನವರು ರಾಜಕೀಯದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡು, ಪಕ್ಷಗಳನ್ನು ಬದಲಾವಣೆ ಮಾಡಿ, ರಾಜ್ಯದ ಜನರ ತೆರಿಗೆ ಹಣದಲ್ಲಿ ಐಷಾರಾಮಿ ಜೀವನ ನಡೆಸಿ, ಜನರ ಹಣದಲ್ಲಿ ಜನರಿಗೆ ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದ್ದಾರೆಯೇ ಹೊರತು ಅವರ ಮನೆಯಿಂದ ಹಣ ತಂದು ರಾಜ್ಯವನ್ನು ಅಭಿವೃದ್ಧಿ ಮಾಡುತ್ತಿಲ್ಲ, ಮಹಾರಾಜರು ಕಟ್ಟಿಸಿದ ಮೈಸೂರು ಮೆಡಿಕಲ್ ಕಾಲೇಜು, ಕೆ ಆರ್ ಆಸ್ಪತ್ರೆಗೆ ಸುಣ್ಣ ಬಣ್ಣವನ್ನು ಹೊಡಿಸಲು ಆಗಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ನಾಲ್ವಡಿ ಅವರು ರಾಜ್ಯದಲ್ಲಿ ಇನ್ನೆಂದು ಜನಿಸಲು ಅಥವಾ ಹೋಲಿಸಲು ಸಾಧ್ಯವಾಗದ ಒಂದು ದೈತ್ಯ ಹೆಸರು. ಯತೀಂದ್ರ ರ ಈ ಹೇಳಿಕೆಯನ್ನು ರಾಜ್ಯದ ಒಬ್ಬನೇ ಒಬ್ಬ ನಾಗರಿಕ, ಬುದ್ಧಿಜೀವಿಗಳು, ಯಾರು ಖಂಡಿತವಾಗಿ ಒಪ್ಪುವುದಿಲ್ಲ.

ಇದುವರೆಗೂ ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸರಿಗೆ ಹೋಲಿಸಿಕೊಳ್ಳುತ್ತಿದ್ದವರು, ಇದೀಗ ಪದೋನ್ನತಿ ಪಡೆದುಕೊಂಡು ನಾಲ್ವಡಿ ಮಹಾರಾಜರೊಂದಿಗೆ ಹೋಲಿಸಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯ,ಇದು ದುರಹಂಕಾರದ ಪರಮಾವಧಿ ಎಂದು ಕಿಡಿಕಾರಿದರು.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರ ಕೊಡುಗೆ ನಮ್ಮ ಜಿಲ್ಲೆಗೆ ನಿಜವಾಗಿ ಹೇಳಬೇಕೆಂದರೆ ಶೂನ್ಯ. ಶಿವಮೊಗ್ಗವನ್ನು ಯಡಿಯೂರಪ್ಪ , ಹಾಸನವನ್ನು ದೇವೇಗೌಡರು ಅಭಿವೃದ್ಧಿ ಮಾಡಿದಂತೆ ಸಿದ್ದರಾಮಯ್ಯರವರು ಮೈಸೂರನ್ನು ಏನು ಅಭಿವೃದ್ಧಿ ಮಾಡಿಲ್ಲ. ಕಳೆದ 3-4 ವರ್ಷಗಳಿಂದ ನಾವು ಮೈಸೂರಿನಲ್ಲಿ ಒಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಿ ಎಂದು ಮನವಿಗಳನ್ನು ನೀಡುತ್ತಿದ್ದರೂ, ಇನ್ನೂ ನೀಡಿಲ್ಲ. ಒಂದು ಕಾಲೇಜನ್ನೇ ನೀಡದವರು, ಮೈಸೂರಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಕಾರವಾಗಿ ಪ್ರಶ್ನಿಸಿದರು.

ಕೇವಲ ತಮ್ಮ ರಾಜಕೀಯ ಪ್ರಚಾರಕ್ಕಾಗಿ, ಮನಬಂದಂತೆ ಹುಚ್ಚು ಹೇಳಿಕೆ ನೀಡುತ್ತಿರುವ ಎಂಎಲ್ಸಿ ಡಾ. ಯತೀಂದ್ರ ಅವರು ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕರ್ನಾಟಕ ಸೇನಾಪಡೆಯ ಸದಸ್ಯರು ಹಾಗೂ ಸಾಮಾಜಿಕ ಹೋರಾಟಗಾರರು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು. ವಿಕ್ರಂ ಅಯ್ಯಂಗಾರ್, ಗೋಲ್ಡನ್ ಸುರೇಶ್, ಪ್ರಜೀಶ್, ಸಿಂದುವಳ್ಳಿ ಶಿವಕುಮಾರ್, ವರಕೂಡುಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ, ನೇಹಾ, ಆನಂದ್ ಗೌಡ, ಡಾ. ಶಾಂತರಾಜೇ ಅರಸ್, ಭಾಗ್ಯಮ್ಮ, ನಂದಕುಮಾರ್, ಹೊನ್ನೇಗೌಡ, ತಾಯೂರು ಗಣೇಶ್, ರಾಧಾಕೃಷ್ಣ, ಎಳನೀರು ರಾಮಣ್ಣ, ಶಿವ ನಾಯ್ಕ, ರಘು ಅರಸ್, ಪ್ರಭಾಕರ್, ದರ್ಶನ್ ಗೌಡ, ಚಂದ್ರಶೇಖರ್, ಕುಮಾರ್, ಸ್ವಾಮಿ ಗೌಡ, ಮೂರ್ತಿ ಲಿಂಗಯ್ಯ, ರವೀಶ್, ವಿಷ್ಣು ಸೇರಿದಂತೆ ‌ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.