ರಸ್ತೆಯೊ‌ ಕೆಸರು ಗದ್ದೆಯೊ‌: ಕಂಠಾಪುರ ಗ್ರಾಮಕ್ಕೆ ಕಂಟಕವಾದ ಮಣ್ಣಿನ‌ರಸ್ತೆ!

Spread the love

ಪಿರಿಯಾಪಟ್ಟಣ: ಈ ಚಿತ್ರವನ್ನು ನೋಡಿ ಇದು ಗದ್ದೆ ಅನಿಸುತ್ತಿದೆಯೊ‌ ರಸ್ತೆ ಅನಿಸುತ್ತಿದೆಯೊ‌ ಓದುಗರೇ ನೀವೇ ಹೇಳಿ.

ಖಂಡಿತಾ ಇದು ಕೆಸರು ಗದ್ದೆಯಂತಹ ರಸ್ತೇನೆ,!. ಇಂತಹ ಕೆಟ್ಟ ರಸ್ತೆ ಇರುವುದು ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನ ಪಿರಿಯಾಪಟ್ಟಣ ತಾಲೂಕು ಕಂಠಾಪುರ ಗ್ರಾಮದಲ್ಲಿ.

ಇಂತಹ ಕೆಸರು ಗದ್ದೆಯಂತಹ ರಸ್ತೆಗಳು ತಮ್ಮ ಕ್ಷೇತ್ರದಲ್ಲಿ ಇವೆ ಎಂಬುದೇ ಸ್ಥಳೀಯ ಶಾಸಕ ಹಾಗೂ ಸಚಿವರೂ ಆದ ಕೆ.ವೆಂಕಟೇಶ್ ಅವರಿಗೆ ಗೊತ್ತಿಲ್ಲವೇನೊ.

ಪಿರಿಯಾಪಟ್ಟಣ ತಾಲೂಕು, ಸಿದ್ದಾಪುರದ ಮುಖ್ಯ ‌ರಸ್ತೆಯಿಂದ ಕಂಠಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ನಿಜಕ್ಕೂ ಕೆಸರು ಗದ್ದೆಯಂತೆಯೇ ಇದೆ.

ಕಂಠಾಪುರ ಗ್ರಾಮದಲ್ಲಿ ಎಸ್ ಸಿ ಎಸ್ ಟಿ ಜನಾಂಗದವರು ಸೇರಿದಂತೆ ಹಲವು ಜಾತಿಯವರು ವಾಸ ಮಾಡುತ್ತಿದ್ದಾರೆ ಜೊತೆಗೆ ಸಮೀಪದಲ್ಲಿ ಪುಟ್ಟ ಶಾಲೆಯೂ ಇದೆ, ಆದರೆ ಈ ರಸ್ತೆಯಲ್ಲಿ ಗ್ರಾಮದ ಜನ ಅದು ಹೇಗೆ ಸಂಚರಿಸುತ್ತಾರೋ ಆ ಭಗವಂತನಿಗೆ ಪ್ರೀತಿ.

ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಶೂ ಮತ್ತು ‌ಸಾಕ್ಸ್ ಗಳನ್ನು ತೆಗೆದು ಕೈನಲ್ಲಿ ಹಿಡಿದುಕೊಂಡು ನಂತರ ರಸ್ತೆ ದಾಟಿಸಿ ಕೈ ಕಾಲು ತೊಳೆದು ಮತ್ತೆ ಶೂ ಹಾಕಿಸಿ ಪೊಷಕರು ಕರೆದುಕೊಂಡು ಹೋಗುತ್ತಾರೆ.ಅಂತಹ ಕೆಟ್ಟ ರಸ್ತೆ ಇದು.

ಈ ರಸ್ತೆಯಲ್ಲಿ ‌ನಡೆಯಲು ಸಾಧ್ಯವೇ ಇಲ್ಲ, ಗ್ರಾಮದ ಜನರು ಚಪ್ಪಲಿ ಕೈನಲ್ಲಿ ಹಿಡಿದು ಅತ್ಯಂತ‌ ಜಾಗರೂಕರಾಗಿ ಸಂಚರಿಸಬೇಕಿದೆ. ಸ್ವಲ್ಪ ಯಾಮಾರಿದರು ಜಾರಿ ಬಿದ್ದು ಕೈ ಕಾಲು ಮುರಿದುಕೊಳ್ಳುವುದು ಗ್ಯಾರಂಟಿ.

ದ್ವಿಚಕ್ರ ವಾಹನಗಳಂತೂ ರಸ್ತೆಯಲ್ಲಿ ಸ್ಕಿಡ್ ಆಗಿ ಬೀಳುತ್ತವೆ ಹಾಗಾಗಿ ವಾಹನಸವಾರರು ಇಲ್ಲಿ ಸಂಚರಿಸಲು ಭಯಪಡುತ್ತಾರೆ. ಅಷ್ಟೇ ಏಕೆ ಮೊನ್ನೆ ಲಾರಿಯ ಚಕ್ರ ಕೂಡ ಇದೇ ರಸ್ತೆಯಲ್ಲಿ ಹೂತುಕೊಂಡಿತ್ತು.ಮಧ್ಯಾಹ್ನ ತನಕ ಇದನ್ನು ತೆಗೆಯಲು ಸಾಧ್ಯವಾಗಿರಲಿಲ್ಲ ಅಂತ ಕೆಟ್ಟ ಪರಿಸ್ಥಿತಿ ಈ ರಸ್ತೆಯದು.

ಕಂಠಾಪುರ‌ ರಸ್ತೆ ರಿಪೇರಿ ಭಾಗ್ಯ ಕಂಡಿದ್ದೆ ಇಲ್ಲ. ಕಳೆದ 30 ವರ್ಷಗಳಿಂದ ಇದೇ ಪರಿಸ್ಥಿತಿ ಎಂದು ಗ್ರಾಮಸ್ಥರು ದೂರುತ್ತಾರೆ.

ಇಂದು ಪಿರಿಯಾಪಟ್ಟಣದಲ್ಲಿ ಕಾರ್ಯಕ್ರಮವೊಂದಕ್ಕೆ ಸ್ವತಃ ಸಚಿವ ಕೆ ವೆಂಕಟೇಶ್ ಅವರು ಆಗಮಿಸಿದ್ದರು. ಆ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತಿತರರು ಗ್ರಾಮದ ರಸ್ತೆಯನ್ನು ತೋರಿಸಲು ಸಚಿವರಿಗೆ ಮನವಿ ಮಾಡಿದ್ದಾರೆ.ಆದರೆ‌ ಸಚಿವರು ತಮಗೆ ಬೇರೆ ಕೆಲಸವಿದೆ ಎಂದು ಹೇಳಿ ನುಣುಚಿಕೊಂಡಿದ್ದಾರೆ.

ತಮ್ಮದೇ ಕ್ಷೇತ್ರದ ರಸ್ತೆಗಳು‌ ಇಷ್ಟು ಹಾಳಾಗಿದ್ದರೂ ಸಚಿವರು ಏಕೆ ಗಮನ ಹರಿಸುತ್ತಿಲ್ಲವೊ ಇದು ಅವರ ಕರ್ತವ್ಯವಲ್ಲವೆ ಎಂದು ‌ಚಲುವರಾಜು ಪ್ರಶ್ನಿಸಿದ್ದಾರೆ.

ಕಂಠಾಪುರ ಗ್ರಾಮ ಪಿರಿಯಾಪಟ್ಟಣ ನಗರ ಸಭೆಗೆ ಸೇರುತ್ತದೆ ಕನಿಷ್ಠ ಈ ರಸ್ತೆಗೆ ಮಣ್ಣು ಜಲ್ಲಿ ತುಂಬಿ ಸಮತಟ್ಟು ಮಾಡಬಹುದು ಆದರೆ ನಗರಸಭೆಯವರು ಕೂಡ ಇತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮದ ಜನತೆಯ ಪರವಾಗಿ ಚಲುವರಾಜು ಆಕ್ರೊಶ‌ ವ್ಯಕ್ತ ಪಡಿಸಿದ್ದಾರೆ.

ಗ್ರಾಮದ ಜನರು ಜಮೀನು,ತೋಟ ಮತ್ತು ದಿನನಿತ್ಯದ ವಸ್ತುಗಳನ್ನು ಕೊಳ್ಳಲು ಪಟ್ಟಣಕ್ಕೆ ಬರುವುದಾದರೂ ಹೇಗೆ, ಈ ರಸ್ತೆಯಲ್ಲಿ ಸಂಚರಿಸಲಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಮತ್ತು ಇಲ್ಲಿನ ಶಾಸಕರೂ ಸಚಿವರೂ ಆದ ವೆಂಕಟೇಶ್ ಅವರು ರಸ್ತೆ ಸರಿಪಡಿಸಬೇಕು ಎಂದು ಕಂಠಾಪುರ ಗ್ರಾಮದ ಜನರ ಪರವಾಗಿ ಚಲುವರಾಜು ಆಗ್ರಹಿಸಿದ್ದಾರೆ.