(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಸಾಮಾನ್ಯವಾಗಿ ದ್ವಿಚಕ್ರ ವಾಹನದಲ್ಲಿ ಪುಂಡು ಹುಡುಗರು ವ್ಹೀಲಿಂಗ್ ಮಾಡಿ ಜನರಿಗೆ ಕಿರಿಕಿರಿ ಮಾಡುತ್ತಾರೆ ಈಗ ಆಟೋ ಚಾಲಕರೂ ಕೂಡಾ ಇದೇ ಹಾದಿ ಹಿಡಿದಿದ್ದು ಜನರ ಪ್ರಾಣದ ಜತೆ ಆಟ ಆಡುತ್ತಿದ್ದಾರೆ.
ಮಹದೇಶ್ವರ ಬೆಟ್ಟದ ಠಾಣಾ ವ್ಯಾಪ್ತಿಯಲ್ಲಿ ಆಟೊ ಚಾಲಕರು ವ್ಹಿಲಿಂಗ್ ಮಾಡುವ ಮೂಲಕ ಅಪಾಯಕಾರಿ ವಾಹನಾ ಚಾಲನೆ ಮಾಡಿದ್ದಾರೆ.

ಈ ಸಂಬಂದ ಮೂವರು ಆಟೋ ಚಾಲಕರ ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಳೆದ ಮೂರ್ನಾಲ್ಕು ದಿನದ ಹಿಂದೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಆಟೋ ಚಾಲಕರು ವ್ಹಿಲಿಂಗ್ ಮಾಡಿ ತಮ್ಮ ಇನ್ಸ್ ಟಾ ಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದರು.
ಮಹದೇಶ್ವರ ಬೆಟ್ಟದ ಠಾಣೆಯ ಇನ್ಸ್ ಪೆಕ್ಟರ್ ಜಗದೀಶ್ ಅವರು ಠಾಣಾದಿಕಾರಿಗೆ ಸಲ್ಲಿಸಿದ ದೂರಿನಲ್ಲಿ ಮಲೆ ಮಹದೇಶ್ವರ ಬೆಟ್ಟ- ತಾಳಬೆಟ್ಟ ಮುಖ್ಯರಸ್ತೆಯಲ್ಲಿ ಮೂವರು ಆಟೊ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದಾರೆ.
ಜತೆಗೆ ಅಟೋಗಳಲ್ಲಿ ವೀಲೀಂಗ್ ಮಾಡುತ್ತ ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿ ಜನರಿಗೆ ಗಾಬರಿ ಉಂಟುಮಾಡಿದ್ದಾರೆ.ಹೀಗೆ ಹೋಗುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ಮೂರ್ನಾಲ್ಕು ದಿನಗಳ ಹಿಂದೆ ಇವೇ ಅಟೋಗಳ ಚಾಲಕರು ಪ್ರಮುಖ ರಸ್ತೆಯಲ್ಲಿ ಅತೀವೇಗ ಮತ್ತು ಅಜಾಗರುಕತೆಯಿಂದ ಅಪಾಯಕಾರಿಯಾಗಿ ಚಾಲನೆ ಮಾಡಿಕೊಂಡು ಹೋಗಿರುವುದು ಗೊತ್ತಾದ ಕೂಡಲೇ ಅಟೋ ಮತ್ತು ಅದರ ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಿ ಬಿಸಿ ಮುಟ್ಟಿಸಲು ಮಹದೇಶ್ವರ ಬೆಟ್ಟದ ಠಾಣೆಯ ಸೊಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಸಿಬ್ಬಂದಿ ಮುಂದಾಗಿದ್ದಾರೆ,ಜತೆಗೆ ವಿಡಿಯೋ ವೀಕ್ಷಿಸಿ ಪ್ರಾಥಮಿಕ ವರದಿ ಸಿದ್ದಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆದರೆ ಮಾದಪ್ಪನ ಕ್ಷೇತ್ರದಲ್ಲಿ ತಿರುವುಗಳ ನಡುವೆಯೂ ಆಟೋಗಳಲ್ಲಿ ವ್ಹೀಲಿಂಗ್ ಮಾಡಿ ಇತರೆ ವಾಹನ ಸವಾರರಿಗೆ ಕಿರಿಕಿರಿ ಮಾಡಿದ್ದಾರೆ.ಬೇರೆಯವರಿಗೆ ತೊಂದರೆ ಆಗಲಿದೆ ಎಂಬ ಪರಿಜ್ಞಾನ ಇಲ್ಲದೆ ವ್ಹಿಲಿಂಗ್ ಮಾಡಿದ್ದಲ್ಲದೆ ವಿಡಿಯೊ ಮಾಡಿ ಅಪ್ಲೊಡ್ ಮಾಡಿ,ತಾವಾಗಿಯೇ ಪೊಲೀಸರಿಗೆ ತಗಲಾಕಿಕೊಂಡಿದ್ದಾರೆ.