ಜಾನಪದವೇ ನಮ್ಮ ನಿಜವಾದ ಜೀವನಾಡಿ – ಡಾ.ಎಸ್.ಬಾಲಾಜಿ

Spread the love

ಅಂಕೋಲಾ: ನಮ್ಮ ಸಂಸ್ಕೃತಿಯ ನಿಜವಾದ ಜೀವನಾಡಿ ಎಂದರೆ ಜಾನಪದವೇ ಆಗಿದೆ, ಅದರ ಬೇರುಗಳಿರುವುದು ಜಾನಪದದ ಮೂಲ ಸತ್ವದಲ್ಲಿ.ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದು ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಜಿ ತಿಳಿಸಿದರು.

ನಗರದ ಪಿ.ಎಂ.ಸಂಯುಕ್ತ ಪ.ಪೂ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ ಏರ್ಪಡಿಸಿದ ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದಕೆ ಚೌಕಟ್ಟಿಲ್ಲ, ಜಾತ್ಯಾತೀತವಾದದ್ದು ಜಾನಪದವನ್ನು ಎಲ್ಲರೂ ಆರಾಧಿಸಬೇಕಾಗಿದೆ, ಈ ಕಲೆ ಬೆಸೆಯುವ ಶಕ್ತಿ ಹೊಂದಿದೆ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಜಾನಪದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಾಜ್ಯಾದ್ಯಂತ ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್ ಹಮ್ಮಿಕೊಳ್ಳುತ್ತಿದೆ,ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಎಲ್ಲಾ ತಾಲೂಕು ಹಾಗೂ ಗ್ರಾಮ ಹಂತಕ್ಕೆ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದು ಡಾ.ಬಾಲಾಜಿ ತಿಳಿಸಿದರು.

ಅಂಕೋಲಾ ನಿಜಕ್ಕೂ ಜಾನಪದದ ತವರು.ದಿ.ಸುಕ್ರಿ ಬೊಮ್ಮಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಅವರು ಸಾವಿರ ಹಾಡುಗಳ ಕಣಜ ಅಗಿರುವುದರಿಂದಲೇ ಎಂದು ನುಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಪ್ರಕಾಶ ನಾಯಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಜನಪದೋತ್ಸವ, ಮಕ್ಕಳ ಜನಪದ ಸಮ್ಮೇಳನ, ಜಿಲ್ಲಾ ಮಟ್ಟದ ಜನಪದ ಗೀತೆ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಜನಪದ ಕಥೆಗಳ ಬಗ್ಗೆ ಹಾಗೂ ಹಾಲಕ್ಕಿ ಸಮುದಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಉಪನ್ಯಾಸಕರಾದ ರಮಾನಂದ ನಾಯಕ, ಶ್ರೀನಿವಾಸ ಯು.ಕೆ ಮತ್ತಿತರರು ಉಪಸ್ಥಿತರಿದ್ದರು.