ಶಿಕಾರಿಪುರ ಕಚೇರಿ ಹುದ್ದೆಗಳ ಸಹಿತಹನೂರು ತಾಲೂಕು ಕೇಂದ್ರಕ್ಕೆ ವರ್ಗಾವಣೆ

Spread the love

ಕೊಳ್ಳೇಗಾಲ: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಉಪ ವಿಭಾಗದ ಪ್ರಸ್ತುತ ಶಿಕಾರಿಪುರ ಕಚೇರಿಯನ್ನು ಹುದ್ದೆಗಳ ಸಮೇತ ಹನೂರು ತಾಲೂಕು ಕೇಂದ್ರಕ್ಕೆ ವರ್ಗಾವಣೆ ಮಾಡಿ ಪುನರ್ ನಾಮಕರಣ ಮಾಡುವಂತೆ ಆದೇಶಿಸಲಾಗಿದೆ.

ಸರ್ಕಾರದ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ರಘುನಾಥ್ ಗೌಡ ಎಸ್ ಪಾಟೀಲ್ ಈ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಲೋಕೋಪಯೋಗಿ ಇಲಾಖೆ ಕಟ್ಟಡಗಳ ಉಪವಿಭಾಗ ಕಚೇರಿಯನ್ನು ಹುದ್ದೆಗಳ ಸಮೇತ ಹನೂರು ತಾಲೂಕು ಕೇಂದ್ರಕ್ಕೆ ವರ್ಗಾವಣೆಗೊಳಿಸಿ ಲೋಕೋಪಯೋಗಿ ಉಪ ವಿಭಾಗ ಹನೂರು ಎಂದು ಪುನರ್ ನಾಮಕರಣ ಮಾಡಿ ಹೊಸ ಕಚೇರಿಯನ್ನು ತೆರೆಯುವಂತೆ ಆದೇಶ ಮಾಡಲಾಗಿದ್ದು, ಸಾರ್ವಜನಿಕರ ಆಡಳಿತಾತ್ಮಕ ಹಿತದೃಷ್ಟಿಯಿಂದ ಮಾರ್ಪಾಡು ಮಾಡಿ ಬೆಂಗಳೂರು ಕಚೇರಿಯನ್ನು ಕೇಂದ್ರ ಸ್ಥಾನದಲ್ಲಿ ಮುಂದುವರಿಸಲಾಗಿದೆ.

ಶಾಸಕ ಎಂ.ಆರ್. ಮಂಜುನಾಥ್ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ : ಲೋಕೋಪಯೋಗಿ ಉಪವಿಭಾಗ ಮಲೆ ಮಹದೇಶ್ವರ ಬೆಟ್ಟ ಕಚೇರಿಯ ನಿರ್ವಹಣಾ ವ್ಯಾಪ್ತಿಯನ್ನು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುವ ಕಾಮಗಾರಿಗಳ ಅನುಷ್ಠಾನಗೊಳಿಸುವ ಉಸ್ತುವಾರಿ ಮತ್ತು ನಿರ್ವಹಣೆಗೆ ಸೀಮಿತಗೊಳಿಸಿ ಸದರಿ ಉಪ ವಿಭಾಗ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ತ್ವರಿತವಾಗಿ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಉಪ ವಿಭಾಗ ಶಿಕಾರಿಪುರ ಕಚೇರಿಯನ್ನು ಹುದ್ದೆಗಳ ಸಮೇತ ಹನೂರು ತಾಲೂಕು ಕೇಂದ್ರಕ್ಕೆ ವರ್ಗಾವಣೆಗೊಳಿಸಿ ಲೋಕೋಪಯೋಗಿ ಉಪ ವಿಭಾಗ ಹನೂರು ಕಚೇರಿ ಎಂದು ಪುನರ್ ನಾಮಕರಣ ಮಾಡಿ ಹೊಸದಾಗಿ ಕಚೇರಿಯನ್ನು ತೆರೆಯಲು ಸರ್ಕಾರ ಜುಲೈ 21ರಂದು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಆದೇಶ ಹೊರಡಿಸಿದೆ.

ಸ್ಥಳಾಂತರಿಸಲಾದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) ಉಪವಿಭಾಗ, ಶಿಕಾರಿಪುರ ಕಚೇರಿ ಕಾರ್ಯವ್ಯಾಪ್ತಿಯನ್ನು ಬೇರೆ ಉಪವಿಭಾಗದ ವ್ಯಾಪ್ತಿಗೆ ಒಳಪಡಿಸುವ ಕುರಿತು ಪ್ರತ್ಯೇಕವಾಗಿ ಆದೇಶ ಹೊರಡಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಹಾಗೂ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹನೂರು ತಾಲ್ಲೂಕು ಕೇಂದ್ರದಲ್ಲಿ ಹೆದ್ದಾರಿ ಅಭಿವೃದ್ಧಿ ಕಚೇರಿಯನ್ನು ತೆರೆಯುವಂತೆ ಮನವಿ ಸಲ್ಲಿಸಿದ್ದರು.

ಈ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಹನೂರು ತಾಲೂಕು ಕೇಂದ್ರದಲ್ಲಿ ಕಚೇರಿ ತೆರೆಯಲು ಸಹಕರಿಸಿದ್ದಾರೆ.

ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ಇದಾಗಿದ್ದು, ವ್ಯಾಪ್ತಿ ದೊಡ್ಡದಾಗಿರುವುದರಿಂದ ಅಧಿಕಾರಿಗಳಿಗೆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುಕೂಲ
ದಾಯಕವಾಗಲಿದೆ ಇಲ್ಲಿ ಕಚೇರಿ ತೆರೆಯುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.