ಈಜಲು ಹೋದಮೂವರು ನರ್ಸಿಂಗ್ ವಿದ್ಯಾರ್ಥಿಗಳು ನೀರುಪಾಲು

ಮೈಸೂರು: ಈಜಲು ಹೋಗಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಮೃತಪಟ್ಟ‌ ದಾರುಣ ಘಟನೆ ಮೈಸೂರಿನ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌

ಮೃತರು ಮಂಡ್ಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು.

ಹಾವೇರಿಯ ಕೃಷ್ಣ(21), ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಗ್ರಾಮದ ಸಿದ್ದೇಶ್ (22), ಪಿರಿಯಾಪಟ್ಟಣದ ಪ್ರಶಾಂತ್(21) ಮೃತಪಟ್ಟ ದುರ್ದೈವಿಗಳು.

ಮೈಸೂರು ಗ್ರಾಮಾಂತರ ಮೀನಾಕ್ಷಿಪುರ ಗ್ರಾಮದ ಕಾವೇರಿ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಈ ಮೂವರು ನೀರು ಪಾಲಾಗಿದ್ದಾರೆ.

ರಜೆ ಇದ್ದುದರಿಂದ ಸಿದ್ದೇಶ್ ಸೇರಿದಂತೆ ಆರು ಮಂದಿ ಸ್ನೇಹಿತರು ಬೈಕ್‌ಗಳಲ್ಲಿ ಕಾವೇರಿ ಹಿನ್ನೀರಿನ ಸೌಂದರ್ಯ ಸವಿಯಲು ಭಾನಯವಾರ ಬೆಳಗ್ಗೆ 11 ಗಂಟೆಗೆ ಬಂದಿದ್ದರು.

ಸಿದ್ದೇಶ್, ಪ್ರಶಾಂತ್ ಮತ್ತು ಕೃಷ್ಣ ನೀರಿಗಿಳಿದಿದ್ದಾರೆ.ಆದರೆ ನೀರಿನ ಸೆಳೆತಕ್ಕೆ ಸಿಕ್ಕಿ ಹೊರಬರಲಾಗಿಲ್ಲ.

ಇದನ್ನು ಕಂಡ ಉಳಿದ ಸ್ನೇಹಿತರು ಸಹಾಯಕ್ಕೆ ಕೂಗಿದ್ದಾರೆ.ಯುವಕರ ಕೂಗಾಟ ಕೇಳಿಸಿಕೊಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ಇಲವಾಲ ಠಾಣೆ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನಿಂದ ನದಿಯಲ್ಲಿ ಶೋಧ ಕಾರ್ಯ ನಡೆಸಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶವಗಳನ್ನು ಹೊರತೆಗೆದಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ‌.