ಗ್ರಾಹಕರ ಸಮಸ್ಯೆ ಬಗೆಹರಿಸಲು ಜಿಲ್ಲಾ ಗ್ರಾಹಕ ಆಯೋಗ ನೆರವು:ನವೀನ ಕುಮಾರಿ

Spread the love

ಮೈಸೂರು: ಗ್ರಾಹಕರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಜಿಲ್ಲಾ ಗ್ರಾಹಕ ಆಯೋಗ ನೆರವಾಗಲಿದೆ ಎಂದು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷೆ ನವೀನ ಕುಮಾರಿ ತಿಳಿಸಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಜಿಲ್ಲಾ ಅಭ್ಯಾಸ ವರ್ಗವನ್ನು ಅಗ್ರಹಾರದ ಕಲ್ಯಾಣ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕ ಆಯೋಗದ ಸಹಾಯದೊಂದಿಗೆ ಗ್ರಾಹಕರು ಶೋಷಣೆ, ಮೋಸ, ವಂಚನೆ ಮುಂತಾದ ಅನ್ಯಾಯಗಳಿಗೆ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ. ಗ್ರಾಹಕರು ತಮಗೆ ಆಗುತ್ತಿರುವ ವಂಚನೆಗಳನ್ನು ತಮ್ಮಲ್ಲಿ ಇಟ್ಟುಕೊಳ್ಳದೆ ಗ್ರಾಹಕ ಆಯೋಗದ ಮುಂದೆ ತಂದು ಸೂಕ್ತವಾದ ಪರಿಹಾರವನ್ನು ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.

ಅಭ್ಯಾಸ ವರ್ಗದ ಮುಖ್ಯ ವಕ್ತಾರರಾಗಿ ಮಾತನಾಡಿದ ಎಬಿಜಿಪಿ ಪ್ರಾಂತ ಮಾರ್ಗದರ್ಶಕರಾದ ಡಾ. ಜ್ಯೋತಿಶಂಕರ್ ರವರು, ಪ್ರತಿಯೊಬ್ಬ ಜನತೆಗೂ ಗ್ರಾಹಕ ಶಿಕ್ಷಣದ ಅಗತ್ಯ ಇದೆ ಎಂದು ತಿಳಿಸಿದರು.

ಗ್ರಾಹಕರು ಸಣ್ಣ ವಿಚಾರದಿಂದ ಹಿಡಿದು ದೊಡ್ಡ ದೊಡ್ಡ ಬೆಲೆ ಬಾಳುವ ವಸ್ತುಗಳ ಖರೀದಿಯಲ್ಲಿಯೂ ಗ್ರಾಹಕ ಜಾಗೃತಿ ವಹಿಸುವುದು ಅತಿ ಮುಖ್ಯ ಎಂದು ಹೇಳಿದರು.

ಗ್ರಾಹಕರಿಗೆ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುವಲ್ಲಿ ಆಗುತ್ತಿರುವ ಶೋಷಣೆಗಳು ಅವುಗಳಿಂದ ಹೊರಬರಲು ಗ್ರಾಹಕರು ಪ್ರಯತ್ನಿಸಬೇಕು. ಶಿಕ್ಷಣ ವ್ಯಾಪಾರಿಕರಣವಾಗಿ ಬೆಲೆ ತೆತ್ತರೂ ಸಹ ಉತ್ತಮ ಶಿಕ್ಷಣ ಪಡೆಯುವಲ್ಲಿ ಹಲವಾರು ನ್ಯೂನತೆಗಳನ್ನು ಪೋಷಕರು ಗಮನಿಸಿದರೂ ಅದನ್ನು ಸಹಿಸಿಕೊಂಡು ಹೋಗುವ ಮನೋಭಾವದೊಂದಿಗೆ ಇಂದಿಗೂ ಇದ್ದಾರೆ ಎಂದು ‌ಬೇಸರ‌ ವ್ಯಕ್ತಪಡಿಸಿದರು.

ಎಲ್ಲವನ್ನು ತಿಳಿದುಕೊಳ್ಳುವ ಹಕ್ಕನ್ನು ಪಡೆದಿದ್ದರೂ, ಎಲ್ಲಿಯವರೆಗೆ ಗ್ರಾಹಕ ಪ್ರಶ್ನೆ ಮಾಡುವುದಿಲ್ಲವೋ ಗ್ರಾಹಕ ಶೋಷಿತ ನಾಗಿಯೇ ಇರುತ್ತಾನೆ. ಎಷ್ಟೋ ವಿಷಯಗಳನ್ನು ಶಿಕ್ಷಣ ಮಾರುಕಟ್ಟೆಯೂ ಸಹ ಮರೆಮಾಚುತ್ತಿವೆ. ಇದರ ಸುಧಾರಣೆ ಅತ್ಯಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂತ ಅಧ್ಯಕ್ಷರಾದ ನರಸಿಂಹ ನಕ್ಷತ್ರಿಜಿ ಅವರು ಗ್ರಾಹಕ ಪಂಚಾಯತ್ ನಡೆದು ಬಂದ ಹಾದಿ ಹಾಗೂ ಸಮಾಜದಲ್ಲಿ ಗ್ರಾಹಕ ಪಂಚಾಯತ್ ನ ಅವಶ್ಯಕತೆ ಮತ್ತು ಹಲವಾರು ಆಯಾಮಗಳಲ್ಲಿ ಗ್ರಾಹಕ ಪಂಚಾಯತ್ ಕಾರ್ಯನಿರ್ವಹಿಸುತ್ತಿರುವ ಬಗೆ ಹಾಗೂ ಗ್ರಾಹಕ ಸಮಸ್ಯೆಗಳಿಗೆ ಸೂಕ್ತವಾದ ಸಮಾಧಾನವನ್ನು ಪಡೆಯಲು ಗ್ರಾಹಕ ಪಂಚಾಯತ್ ಮಾರ್ಗದರ್ಶನ ನೀಡುತ್ತಿರುವುದರ ಬಗ್ಗೆ ಮಾಹಿತಿ ನೀಡಿದರು.

ಗ್ರಾಹಕ ಪಂಚಾಯತಿನ ಮೈಸೂರು ಜಿಲ್ಲಾ ಕಾರ್ಯಕಾರಿಣಿಯು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಎಲ್ಲಾ ಕಾರ್ಯಕರ್ತರು ಸ್ವಯಂಸೇವಕರಾಗಿ ಗ್ರಾಹಕರ ಹಿತಕ್ಕಾಗಿ ತಮ್ಮ ಉದ್ಯೋಗದ ಜೊತೆಗೆ ಸಂಘಟನೆಯ ಕೆಲಸಕ್ಕೆ ಸಮಯ ನೀಡಿ ಎಂದು ಕಾರ್ಯಕರ್ತರಿಗೆ ಪ್ರಾಂತದ ಕಾರ್ಯದರ್ಶಿ ಗಾಯತ್ರಿ ನಾಡಿಗ್ ಅವರು ಕರೆ ನೀಡಿದರು.

ವನವಾಸಿ ಕಲ್ಯಾಣ ಪ್ರಾಂತದ ಕೋಶಾಧ್ಯಕ್ಷ ಉಮೇಶ್ ಪ್ರಸಾದ್ ಅವರು ಮಾತನಾಡಿ, ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರ ಏನೆಂಬುದನ್ನು ಕಥೆಗಳ ಮೂಲಕ ಮನಮುಟ್ಟುವಂತೆ ತಿಳಿಸಿದರು.

ಇದೇ ವೇಳೆ ಗ್ರಾಹಕ ಪಂಚಾಯತಿನ ಜಿಲ್ಲಾ ಕಾರ್ಯಕಾರಿಣಿಯ ಘೋಷಣೆ ನಡೆಯಿತು. ಮೈಸೂರು ಜಿಲ್ಲಾ ಗ್ರಾಹಕ ಪಂಚಾಯತ್ ಅಧ್ಯಕ್ಷರಾಗಿ ಸಿ ಎಸ್ ಚಂದ್ರಶೇಖರ್ ಅವರು ಪುನರಾಯ್ಕೆಯಾದರು.

ವಿಕ್ರಂ ಅಯ್ಯಂಗಾರ್ ಅವರು ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಶ್ರೀಕಂಠೇಶ್, ಸಹ ಕಾರ್ಯದರ್ಶಿಯಾಗಿ ವಲ್ಲಿನಾಥ್ ಹಾಗೂ ರಕ್ತದಾನಿ ಮಂಜು ಅವರು, ಮಹಿಳಾ ಪ್ರಮುಖರಾಗಿ ಪುಷ್ಪ ಅವರು ಹಾಗೂ ಕಾರ್ಯಕಾರಿಣಿಗೆ ಜಿಲ್ಲಾ ಕಾನೂನು ಸಲಹೆಗಾರರಾಗಿ ಅಡ್ವಕೇಟ್ ಪುಷ್ಪ ಅವರು ಆಯ್ಕೆಯಾದರು.