ಪಿರಿಯಾಪಟ್ಟಣ: ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆ ಸುಸಜ್ಜಿತವಾಗಿದ್ದು ಎಲ್ಲಾ ಸೌಲಭ್ಯಗಳನ್ನು ಉಳ್ಳ ಒಂದು ದೊಡ್ಡ ಆಸ್ಪತ್ರೆ. ಆದರೆ ಈ ಆಸ್ಪತ್ರೆ ಬಡ ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ.
ಸರ್ಕಾರವೇನೊ ಬಡಜನರಿಗೆ ಉತ್ತಮ ಆರೋಗ್ಯ ಭಾಗ್ಯ ಸಿಗಲಿ ಎಂದು ಎಲ್ಲಾ ಪಟ್ಟಣಗಳಲ್ಲೂ ಉತ್ತಮವಾದ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಿ ಕೊಟ್ಟಿದೆ,ಜತೆಗೆ ಉತ್ತಮ ಸಲಕರಣೆಗಳು, ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ.
ಆದರೆ ಈ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ. ಈ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರುಗಳು, ನರ್ಸ್ ಗಳು ಎಲ್ಲರೂ ಇದ್ದಾರೆ ಆದರೆ ಸಮಯಕ್ಕೆ ಸರಿಯಾಗಿ ಬರುವುದೂ ಇಲ್ಲ,ಒಂದೊಮ್ಮೆ ಬಂದರೂ ಅತ್ಯವಶ್ಯಕವಾದಾಗ ಇವರುಗಳು ಸಿಗುವುದೇ ಇಲ್ಲ.
ವೈದ್ಯರು ತಮ್ಮ ಇಷ್ಟ ಬಂದ ವೇಳೆಗೆ ಬರುತ್ತಾರೆ, ಒಮ್ಮೊಮ್ಮೆ 12,1 ಗಂಟೆ ಆದರೂ ಬರುವುದಿಲ್ಲ,ಇವರನ್ನು ಕೇಳುವವರು ಯಾರು ಇಲ್ಲ.ರೋಗಿಗಳು ಕ್ಯೂನಲ್ಲಿ ನಿಂತು ಕಾಯುತ್ತಿರುತ್ತಾರೆ ಅಷ್ಟೆ.ಇಲ್ಲಿ ವೈದ್ಯಾಧಿಕಾರಿಗಳು ಇದ್ದಾರೆಯೊ ಇಲ್ಲವೊ ಎಂಬ ಅನುಮಾನ ಕಾಡುತ್ತಿದೆ.
ಬಿಪಿಎಲ್ ಕಾರ್ಡ್ ಇದ್ದವರು ಅಂದರೆ ಕಡುಬಡವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನ್, ಎಕ್ಸರೇ ಮತ್ತಿತರ ಸೌಲಭ್ಯಗಳು ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗಬೇಕು. ಆದರೆ ಇಲ್ಲಿ ಬಡವರನ್ನೂ ಬಿಡದೆ ಕಿತ್ತು ತಿನ್ನುತ್ತಾರೆ.ನೂರು,ಇನ್ನೂರು ರೂಪಾಯಿ ತೆಗೆದುಕೊಳ್ಳುತ್ತಾರೆ. ಹೀಗಾದರೆ ಕಡುಬಡವರು ಹಣ ಎಲ್ಲಿಂದ ತರಬೇಕು ದೇವರು ವರ ಕೊಟ್ಟರು ಪೂಜಾರಿ ಕೊಡುವುದಿಲ್ಲ ಎಂಬ ಗಾದೆಯಂತೆ ಈ ಆಸ್ಪತ್ರೆಯ ಕಥೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ನಾನೇ ಖುದ್ದಾಗಿ ನಮ್ಮ ಕಡೆಯ ರೋಗಿಯೊಬ್ಬರನ್ನು ಬಿಪಿಎಲ್ ಕಾರ್ಡ್ ತೋರಿಸಿಯೇ ಪಿರಿಯಾಪಟ್ಟಣದ ಈ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಅವರಿಗೆ ಔಷಧಿಯನ್ನು ಚೀಟಿಯಲ್ಲಿ ವೈದ್ಯರು ಬರೆದುಕೊಟ್ಟರು.ಆದರೆ ಆಸ್ಪತ್ರೆಯಲ್ಲಿ ಔಷಧಿ ವಿಭಾಗದವರು ಔಷಧಿ ಮುಗಿದಿದೆ,ಹೊರಗಡೆ ತೆಗೆದುಕೊಳ್ಳಿ ಎಂದು ಖಾಸಗಿ ಕ್ಲಿನಿಕ್ ಗಳಿಗೆ ಬರೆದುಕೊಡುತ್ತಾರೆ. ಜೊತೆಗೆ ಸ್ಕ್ಯಾನ್ ಮತ್ತಿತರ ಸೌಲಭ್ಯಗಳನ್ನು ಹೊರಗಡೆ ಮಾಡಿಸಿ ಎಂದು ಹೇಳಿದ್ದಾರೆ. ನಾನೇ ಖುದ್ದಾಗಿ ಇದನ್ನು ಅನುಭವಿಸಿದ್ದೇನೆ ಎಂದು ತಮ್ಮ ಬೇಸರವನ್ನು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ನೊಂದಿಗೆ ಹಂಚಿಕೊಂಡಿದ್ದಾರೆ.
ಇನ್ನು ಈ ಆಸ್ಪತ್ರೆಯ ವಾಚ್ ಮ್ಯಾನ್ ಅಂತೂ ತಾನೇ ಸರ್ವಾಧಿಕಾರಿ ಅಂತೆ ಆಡುತ್ತಾರೆ. ಯಾರೇ ಬಂದರೂ ಧಮ್ಕಿ ಹಾಕುವುದು,ಡಾಕ್ಟರ್ ಇಲ್ಲ ಹೋಗಿ ನಾಳೆ ಬನ್ನಿ ಎಂದು ಹೇಳುವುದು ಮಾಡುತ್ತಾರೆ.ಇಲ್ಲಿನ ವೈದ್ಯರು ಕೂಡಾ ಎಲ್ಲ ರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ ಹಿರಿಯ ನಾಗರಿಕರು ಬಂದಾಗ ಅವರಿಗೆ ಬೇಸರವಾಗುವುದಿಲ್ಲವೆ ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳು ಉತ್ತಮ ದರ್ಜೆಗೆ ಏರಬೇಕು ಕಟ್ಟ ಕಡೆಯ ವ್ಯಕ್ತಿಗೂ ಅತ್ಯುತ್ತಮ ಆರೋಗ್ಯ ಸೌಲಭ್ಯ ಸಿಗಬೇಕು ಎಂದು ಸರ್ಕಾರ ಏನೆಲ್ಲಾ ಸೌಲಭ್ಯಗಳನ್ನು ಕೊಟ್ಟರೂ ಇಂತಹ ಆಸ್ಪತ್ರೆಯ ವೈದ್ಯರು,ದಾದಿಯರು,ನೌಕರರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇಲ್ಲಿ ಎಲ್ಲವೂ ಕಮಿಷನ್ ನಿಂದಲೇ ನಡೆಯುತ್ತಿದೆ ಎಂದು ಚೆಲುವರಾಜು ದೂರಿದ್ದಾರೆ.
ಪ್ರಿಯಾಪಟ್ಟಣದ ಶಾಸಕರು ಆದ ಸಚಿವ ಕೆ ವೆಂಕಟೇಶ್ ಅವರು ಕೂಡಲೇ ಈ ಆಸ್ಪತ್ರೆಯ ಬಗ್ಗೆ ಗಮನಹರಿಸಬೇಕು ಮತ್ತು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಗ್ರಾಮಾಂತರ ಪ್ರದೇಶಗಳ ಆಸ್ಪತ್ರೆ ಕಡೆಗೆ ಒಮ್ಮೆಯಾದರೂ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಬೇಕು, ಬಡವರನ್ನು ಸರಿಯಾಗಿ ನೋಡಿಕೊಳ್ಳಬೇಕು ಉತ್ತಮ ಔಷಧೋಪಚಾರಗಳನ್ನು ಉಚಿತವಾಗಿ ನೀಡಬೇಕೆಂದು ತಾಕೀತು ಮಾಡಲಿ ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.