ಕಾಂಗ್ರೆಸ್ ಸರ್ಕಾರದಿಂದ ಕೀಳು ಮಟ್ಟದ ರಾಜಕೀಯ- ಅಶೋಕ್ ಟೀಕೆ

Spread the love

ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಆತನ ತಾಯಿ ನಾನು ಬೈರತಿ ಬಸವರಾಜ್ ವಿರುದ್ಧ ದೂರು ಕೊಟ್ಟಿಲ್ಲ, ಪೊಲೀಸರೇ ಹೆಸರು ಹಾಕಿಕೊಂಡಿದ್ದಾರೆ ಎಂದು ಹೇಳಿರುವುದು ಕಾಂಗ್ರೆಸ್ ಸರ್ಕಾರದ ಕೀಳು ಮಟ್ಟದ ರಾಜಕೀಯ ತೋರುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಮಾತೆತ್ತಿದರೆ ಸಿಬಿಐ, ಐಟಿ, ಇಡಿ ಮೂಲಕ ಕೇಂದ್ರ ಸರ್ಕಾರ ವಿಪಕ್ಷಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಅಪಪ್ರಚಾರ ಮಾಡುವ ಕರ್ನಾಟಕದ ‌ಕಾಂಗ್ರೆಸ್ ನಾಯಕರು, ದೂರಿನಲ್ಲಿ ಶಾಸಕರ ಹೆಸರೇ ಇಲ್ಲದಿದ್ದರೂ ಅವರ ಮೇಲೆ ದುರುದ್ದೇಶದಿಂದ ಎಫ್ಐಆರ್ ಹಾಕಿರುವುದು ಯಾವ ಸೀಮೆ ನ್ಯಾಯ ಎಂದು ಅಶೋಕ್ ‌ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಸುಳ್ಳು ಕೇಸುಗಳನ್ನು ಹಾಕುವ ಮೂಲಕ ಬಿಜೆಪಿ ಶಾಸಕರಿಗೆ ಬೆದರಿಕೆ ಹಾಕಬಹುದು ಎಂಬ ಭ್ರಮೆಯಿಂದ ಕಾಂಗ್ರೆಸ್ ಸರ್ಕಾರ ಹೊರಬರಲಿ, ಬಿಜೆಪಿ ಯಾವುದೇ ಅಪರಾಧಿಗಳನ್ನು ರಕ್ಷಿಸುವುದಿಲ್ಲ. ಆರೋಪ ಇದ್ದರೆ ಕಾನೂನು ಪ್ರಕಾರ ತನಿಖೆ ಮಾಡಲಿ, ನ್ಯಾಯಾಲಯದಲ್ಲಿ ಸಾಬೀತು ಮಾಡಲಿ, ಅದು ಬಿಟ್ಟು ಈ ರೀತಿ ದ್ವೇಷ ರಾಜಕಾರಣ ಮಾಡಿ ವಿಪಕ್ಷ ಶಾಸಕರನ್ನು ಟಾರ್ಗೆಟ್ ಮಾಡಿದರೆ, ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಶೋಕ್ ಎಚ್ಚರಿಸಿದ್ದಾರೆ.