ನಂಜನಗೂಡು: ನಂಜನಗೂಡು ಬಾಲಕರ ಪದವಿ ಪೂರ್ವ ಕಾಲೇಜನಲ್ಲಿಂದು ಅಪೂರ್ವ ಪ್ರಸಂಗ ಕೂಡಿ ಬಂದಿತ್ತು.
ಇದಕ್ಕೆ ವಿಕಲಚೇತನ ವಿದ್ಯಾರ್ಥಿ ಸಿ. ವಿನಯ್ ಕಾರಣ.
ನಂಜನಗೂಡಿನ ಶಂಕರಪುರದ ನಿವಾಸಿ ವಿನಯ್. ಹೆಸರಿಗೆ ಅನ್ವರ್ಥವಾಗಿ ವಿನಯ ವಿದೇಯ ವಿದ್ಯಾರ್ಥಿ. ಮೆಲು ಮಾತು,ನಗು ಮುಖ. ಈ ಸುಂದರ ಮನದ ಹುಡುಗ ದೇವರ ಮಗು.ಸೊಂಟದ ಕೆಳಗಿನ ಭಾಗ ಕ್ರಿಯಾಶೀಲವಿಲ್ಲ ಒಂದು ಕೈ ಸ್ವಾಧೀನವಿಲ್ಲ. ಎರಡು ಕೈಗಳಿಂದ ಭಾರದ ಪುಸ್ತಕವನ್ನು ಹಿಡಿಯಲಾರದ ವಿಶಿಷ್ಟ ಚೇತನ ಮಗು ಈತ.
ತಂದೆ ಚಿಕ್ಕಲಿಂಗಯ್ಯ ತಾಯಿ ಸಣ್ಣಮಂಚಮ್ಮ. ತಾಯಿ ಮತ್ತು ಗೆಳೆಯರು ವಿನಯನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ತಾಯಿಯ ತಾಳ್ಮೆ ಅವನಿಗೊಂದು ಭರವಸೆ. ಸಹ್ಯಭಾವದೊಡನೆ ನಿಸರ್ಗಕರೆಗೂ ಕರೆದೊಯ್ಯುವ ಸಹಪಾಠಿಗಳು ಇವನ ಬದುಕಿಗೆ ಚೈತನ್ಯವೇ ಸರಿ.
ಈ ವಿಶೇಷ ಚೇತನ ವಿಧ್ಯಾರ್ಥಿ ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿ ಯು ಸಿ ವ್ಯಾಸಂಗ ಮಾಡುತ್ತಿದ್ದಾನೆ. ಪ್ರತಿನಿತ್ಯ ತಾಯಿ ತ್ರಿಚಕ್ರ ವಾಹನದಲ್ಲಿ ಮಗನನ್ನು ಕಾಲೇಜಿಗೆ ಕರೆದುಕೊಂಡು ಬರಬೇಕು ಮತ್ತೆ ಸಾಯಂಕಾಲ ಕರೆದುಕೊಂಡು ಹೋಗಬೇಕು.
ಕಾಲೇಜಿನ ಸಮಯದಲ್ಲಿ ಗೆಳೆಯರಿಂದ ಸಹಕಾರ. ಪಿಯುಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣ.ಮುಂದೆ ಪದವಿಗೆ ಸೇರಬೇಕಾದರೆ ಮನೆಯಿಂದ ಡಿಗ್ರಿ ಕಾಲೇಜು ತುಂಬಾ ದೂರ ಇರುವ ಕಾರಣ ಪಿಯುಸಿಗೆ ಸಾಕು ಎಂಬ ಚಿಂತನೆಯಲ್ಲಿ ಇದ್ದ ವಿನಯ್.
ತನ್ನ ಹಳೆಯ ತ್ರಿಚಕ್ರವಾಹನದಲ್ಲಿ ಅಡಕವಾಗಿದ್ದ ವಿನಯನ ಬದುಕಿನಲ್ಲಿ ಸುದಿನ ಬಂದಿದೆ.
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತನ್ನ ಅಂಕಪಟ್ಟಿ ತೆಗೆದುಕೊಳ್ಳಲು ಬಂದಾಗ ಕಾಲೇಜಿನ ಆಂಗ್ಲ ಭಾಷೆಯ ಉಪನ್ಯಾಸಕರಾದ ರಂಗಸ್ವಾಮಿ ಅವರು ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್.ದಿನೇಶ್ ಅವರಿಗೆ ಈ ವಿದ್ಯಾರ್ಥಿಗೆ ನಿಮ್ಮ ಲಯನ್ ಸಂಸ್ಥೆಯಿಂದ ಅಥವಾ ಗೆಳೆಯರಿಂದ ಬ್ಯಾಟರಿ ಆಧಾರಿತ ತ್ರಿಚಕ್ರ ವಾಹನ ಕೊಡಿಸಿದರೆ ಖಂಡಿತ ಈತನ ಮುಂದಿನ ವ್ಯಾಸಂಗ ಮುಂದುವರೆಯುತ್ತದೆ ಎಂದು ಹೇಳಿದರು.
ಅದಕ್ಕೆ ತಕ್ಷಣ ಸ್ಪಂದಿಸಿದ ಕಾಲೇಜಿನ ಪ್ರಾಂಶುಪಾಲರು ಬೆಂಗಳೂರಿನ ಬ್ಯಾಟರಿ ಅಧಾರಿತ ತ್ರಿಚಕ್ರ ಸಂಸ್ಥೆಯನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ವೆಚ್ಚವನ್ನು ಭರಿಸಲು ತಮ್ಮ ಲಯನ್ ಸಂಸ್ಥೆಯ ಲಯನ್ಸ್ ಕ್ಲಬ್ ಅಂಬಾಸಿಡರಸ್ ಮತ್ತು ಇತರ ಗೆಳೆಯರಿಗೆ ಮಾಹಿತಿ ನೀಡಿದರು.ಮಾಹಿತಿ ನೀಡಿದ ಕೆಲವೇ ಗಂಟೆಗಳಲ್ಲಿ ಬ್ಯಾಟರಿ ಆಧಾರಿತ ತ್ರಿಚಕ್ರ ವಾಹನಕ್ಕೆ ಬೇಕಾದ ಹಣ ಸಂದಾಯವಾಯಿತು.
ಸುಮಾರು ೪೫೦೦೦ ರೂ ಗಳನ್ನು ದಾನಿಗಳಾದ ಲಯನ್ ಟಿ ಹೆಚ್ ವೆಂಕಟೇಶ್, ಲಯನ್ ವೇದನಾಯಗಮ್, ಲಯನ್ ಎಮ್.ಎನ್. ಜಯಪ್ರಕಾಶ್, ಲಯನ್ ವಿ. ಶ್ರೀಧರ್ ,ಎಚ್.ವಿ.ಮಂಜುನಾಥ್, ಪುಟ್ಟಸ್ವಾಮಿಗೌಡ,ನಂಜುಂಡಸ್ವಾಮಿ(ಅಂಬಿ), ಲಯನ್ ಸಿ.ಆರ್. ದಿನೇಶ್ ಅವರು ಧನ ಸಹಾಯ ಮಾಡಿದರು.
ಇದೇ ಖುಷಿಯಲ್ಲಿ ಕಾಲೇಜಿನಲ್ಲಿ ಸರಳ ಸಮಾರಂಭ ಹಮ್ಮಿಕೊಂಡು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ರಾಮಪ್ರಸಾದ್, ಹಿರಿಯ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ ಮತ್ತು ಎಲ್ಲಾ ಉಪನ್ಯಾಸಕರ ಸಮ್ಮುಖದಲ್ಲಿ ವಿಶೇಷ ಚೇತನ ವಿದ್ಯಾರ್ಥಿ ವಿನಯ್ ಗೆ ಬ್ಯಾಟರಿ ಆಧಾರಿತ ತ್ರಿಚಕ್ರವನ್ನು ನೀಡಲಾಯಿತು.

ವಿನಯ್ ಸ್ವತಂತ್ರವಾಗಿ ಬ್ಯಾಟರಿ ಆಧಾರಿತ ತ್ರಿಚಕ್ರ ವಾಹನವನ್ನು ಓಡಿಸಿದಾಗ ಉಪನ್ಯಾಸಕರು ಮತ್ತು ಎಲ್ಲಾ ವಿದ್ಯಾರ್ಥಿಗಳು ಸಾರ್ಥಕ ಭಾವದಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಈ ವೇಳೆ ವಿದ್ಯಾರ್ಥಿ ವಿನಯ್ ಕಣ್ಣಿನಲ್ಲಿ ಆತ್ಮವಿಶ್ವಾಸ ಪ್ರಜ್ವಲಿಸುತ್ತಿತ್ತು.
ನಂಜಗೂಡಿನ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ.ರವಿಶಂಕರ್ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್.ದಿನೇಶ್,ಉಪನ್ಯಾಸಕರಾದ ಡಾ.ಟಿ.ಕೆ.ರವಿ ಅವರು ಪದವಿ ಕಾಲೇಜಿನ ಶುಲ್ಕವನ್ನು ಭರಿಸಿ ವಿನಯ್ ಅವರನ್ನ ಪ್ರಥಮ ವರ್ಷದ ಪದವಿಗೆ ಸೇರ್ಪಡೆ ಮಾಡಿಸಿ ಆದರ್ಶ ಮೆರೆದಿದ್ದಾರೆ.
ವಿನಯ್ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದು ಮುಂದೆ ಉದ್ಯೋಗ ಪಡೆಯುವ ಮೂಲಕ ಸಾಧನೆ ಮಾಡಿ ಸಾಧಕರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲಿ ಎಂಬ ಆಶಯ ಪ್ರತಿಯೊಬ್ಬರದ್ದಾಗಿದೆ ಎಂದು
ನಂಜನಗೂಡು ಪದವಿ ಪೂರ್ವ ಕಾಲೇಜು
ಕನ್ನಡ ಉಪನ್ಯಾಸಕರಾದ
ಡಾ.ಕೆ.ಮಾಲತಿ ತಿಳಿಸಿದ್ದಾರೆ.