ವ್ಯಕ್ತಿಯ ಕೊ*ಲೆ ಮಾಡಿ ಕೆರೆಗೆ ಬಿಸಾಡಿದ ದುಷ್ಕರ್ಮಿಗಳು

Spread the love

ಯಾದಗಿರಿ: ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ನಾಯ್ಕಲ್ ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ದುಷ್ಕರ್ಮಿಗಳು ಕೊಲೆ ಮಾಡಿ ದೇಹವನ್ನ ಕೆರೆಗೆ ಹಾಕಿದ್ದಾರೆ.

ಪಿಡ್ಡಪ್ಪ ಮಲ್ಲಪ್ಪ ದಿಡ್ಡಿಮನಿ (45)ಎಂಬವರ ದೇಹ ಕೆರೆಯಲ್ಲಿ ಪತ್ತೆಯಾಗಿದೆ.

ಕುರಿ ಕಳ್ಳತನದ ವೈಷಮ್ಯದಿಂದ‌ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಇಬ್ಬರ ವಿರುದ್ಧ ದೂರು ದಾಖಲಾಗಿದೆ.

ಇದು ಕೊಲೆ ಎಂದು ಕುಟುಂಬಸ್ಥರು ದೂರಿದ್ದು, ಮೃತರ ಪತ್ನಿ ತಾರಮ್ಮ ವಡಗೇರಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತ ಪಿಡ್ಡಪ್ಪ, ಜಿಲಾನಿ ಮತ್ತು ಮರಿಲಿಂಗ ಎಂಬುವವರು ಕುರಿಗಳ ಕಳ್ಳತನದಲ್ಲಿ ತೊಡಗಿದ್ದರು. ಈ ಕಳ್ಳ ವ್ಯವಹಾರದಲ್ಲಿ ಉಂಟಾದ ವೈಷಮ್ಯ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಮೃತ ಪಿಡ್ಡಪ್ಪ ಹಾಲುಮತ ಸಮುದಾಯಕ್ಕೆ ಸೇರಿದವರಾಗಿದ್ದು, ಸಂಭಾವಿತ,ಅವರ ತಾಯಿ ಭೀಮಮ್ಮ ಕಳ್ಳರ ಸಹವಾಸ ಬೇಡ ಎಂದು ಮಗನಿಗೆ ಬುದ್ಧಿ ಹೇಳಿದ್ದಾರೆ.ಹಾಗಾಗಿ ಪಿಡ್ಡಪ್ಪ ತನ್ನ ಗೆಳೆಯರಿಂದ ದೂರವಾಗಿದ್ದ.

ಇದರಿಂದ ಕೋಪಗೊಂಡಿದ್ದ ಜಿಲಾನಿ ಮತ್ತು ಮರಿಲಿಂಗ ಕುಡಿದು ಬಂದು, ನಮ್ಮ ಜೊತೆ ಕುಡಿದು ತಿಂದು ಈಗ ದೂರವಾಗುತ್ತೀಯಾ‌ ನಿನ್ನನ್ನು ಕೊಂದು ಹಾಕುತ್ತೇವೆ ಎಂದು ಪಿಡ್ಡಪ್ಪನಿಗರ ಧಮಕಿ ಹಾಕಿ ಹೋಗಿದ್ದರು ಎಂದು ಮೃತನ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪಿಡ್ಡಪ್ಪ ನಾಪತ್ತೆಯಾಗುವ ಹಿಂದಿನ ದಿನ ಕೂಡಾ ಜಿಲಾನಿ ಮತ್ತು ಮರಿಲಿಂಗ ಪಿಡ್ಡಪ್ಪನ ಮನೆಗೆ ಬಂದು ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತೇವೆ ಎಂದು ಜಗಳ ಮಾಡಿ ಹೋಗಿದ್ದರೆಂದು ತಾರಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಪಿಡ್ಡಪ್ಪ ಎಷ್ಟು ಹೊತ್ತಾದರೂ ಮನೆಗೆ ಬಾರದಿದ್ದಾಗ, ಗ್ರಾಮಸ್ಥರ ಜೊತೆಗೂಡಿ ಕೆರೆಯ ಕಡೆಗೆ ಹೋಗಿ ಹುಡುಕಾಡಿದಾಗ, ಕೆರೆಯ ದಂಡೆಯಲ್ಲಿ ಪಿಡ್ಡಪ್ಪನ ಬಟ್ಟೆ ಮತ್ತು ಚಪ್ಪಲಿಗಳು ಪತ್ತೆಯಾಗಿವೆ.

ತೀವ್ರ ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಮೃತದೇಹ ದೊರೆತಿದ್ದು, ಮೃತದೇಹದ ಕಾಲುಗಳನ್ನು ಮೀನಿನ ಬಲೆಯಿಂದ ಕಟ್ಟಲಾಗಿತ್ತು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಡಗೇರಾ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು,
ಪೊಲೀಸರು‌ ತನಿಖೆ ನಡೆಸುತ್ತಿದ್ದಾರೆ.