ಹುಣಸೂರು: ಹುಣಸೂರಿನ ಹೃದಯ ಭಾಗದಲ್ಲಿರುವ ಸಾರ್ವಜನಿಕ ಆಸ್ಪತ್ರೆಯನ್ನು ಹಿಂದೆ ದಿವಂಗತ ಡಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಜನರ ಆರೋಗ್ಯ ಭಾಗ್ಯಕ್ಕಾಗಿ ನಿರ್ಮಿಸಿದ್ದರು.
ಈ ಹುಣಸೂರಿನ ಸರ್ಕಾರಿ ಆಸ್ಪತ್ರೆ ಹುಣಸೂರು ಪಟ್ಟಣ ಹಾಗೂ ಸುತ್ತಮುತ್ತಲ ಬಹಳಷ್ಟು ಗ್ರಾಮಗಳ ಜನರಿಗೆ ಆರೋಗ್ಯ ಭಾಗ್ಯ ನೀಡುತ್ತಾ ಸಂಜೀವಿನಿ ಯಾಗಿದೆ.
ಈ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯರು, ಉತ್ತಮ ಸಿಬ್ಬಂದಿಗಳು, ನರ್ಸ್ ಗಳು ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಹಾಗಾಗಿ ಈ ಆಸ್ಪತ್ರೆ ಹುಣಸೂರು ತಾಲೂಕಿನಲ್ಲೇ ಬಹಳ ಪ್ರಸಿದ್ಧಿ ಪಡೆದಿದೆ.
ಉತ್ತಮ ವೈದ್ಯರಿಗೆ ತಕ್ಕಂತೆ ಉತ್ತಮ ಸಲಕರಣೆಗಳು ಮತ್ತು ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ಸಿಕ್ಕಿದ್ದಿದ್ದರೆ ಇನ್ನು ಅದೆಷ್ಟೋ ಮಂದಿಗೆ ಕಾಯಿಲೆಗಳು ಶೀಘ್ರವಾಗಿ ಉಚಿತವಾಗಿ ಗುಣವಾಗುತ್ತಿತ್ತು.
ಆದರೆ ಈ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಿಷನ್, ಎಕ್ಸರೇ ಮಿಷನ್ ಮತ್ತಿತರ ಉಪಕರಣಗಳು ಕೆಟ್ಟುಹೋಗಿವೆ. ಈ ಮಿಷನ್ ಗಳು ಕೆಟ್ಟು ಮೂರ್ನಾಲ್ಕು ತಿಂಗಳುಗಳಾಗಿದ್ದು,ಗ್ರಹಣ ಹಿಡಿದಿದೆ.
ಈ ಯಂತ್ರಗಳು ಕೆಟ್ಟು ನಿಂತಿರುವುದರಿಂದ ಅನಿವಾರ್ಯವಾಗಿ ಇಲ್ಲಿನ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ಬರೆದುಕೊಡುತ್ತಿದ್ದಾರೆ.
ಹಳ್ಳಿಯ ಜನರಿಗೆ ಉಪಯೋಗವಾಗಲಿ ಎಂದು ಮಾಜಿ ಮುಖ್ಯಮಂತ್ರಿಗಳು ಈ ಆಸ್ಪತ್ರೆಯನ್ನು ಕಟ್ಟಿಸಿದ್ದರು.ಆದರೆ ಯಂತ್ರೋಪಕರಣಗಳ ಸೌಲಭ್ಯ ಲಭ್ಯವಾಗದೆ ಜನರು ದುಡ್ಡು ತೆತ್ತು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗಿದೆ.
ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರ ಹಣ ಮತ್ತು ಸಮಯ ಎರಡು ವ್ಯರ್ಥವಾಗುತ್ತಿದೆ ಅಲ್ಲದೆ ಬಹಳಷ್ಟು ಜನ ಬಡವರೇ ಇರುವುದರಿಂದ ಕಾಯಿಲೆ ಗುಣಪಡಿಸಿಕೊಳ್ಳಲು ಬೇರೆ ಸರ್ಕಾರಿ ಆಸ್ಪತ್ರೆಗೆ ಅಥವಾ ಮೈಸೂರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲ್ಲೂಕು ಅಧ್ಯಕ್ಷ ಚೆಲುವರಾಜು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಹುಣಸೂರಿನ ಜನಪ್ರತಿನಿಧಿಗಳು ಅದರಲ್ಲೂ ಮುಖ್ಯವಾಗಿ ಇಲ್ಲಿನ ಶಾಸಕರು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಸ್ಥಳೀಯ ಜನರಿಗೆ ಜರೂರಾಗಿ ಬೇಕಾಗಿರುವ ಸ್ಕ್ಯಾನಿಂಗ್ ಮಿಷನ್, ಎಕ್ಸರೆ ಮಿಷನ್ ಮತ್ತಿತರ ಉಪಕರಣಗಳನ್ನು ಹೊಸದಾಗಿ ತರಿಸಿಕೊಟ್ಟು ಪುಣ್ಯ ಕಟ್ಟಿಕೊಳ್ಳಲಿ ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.
ಸ್ಕ್ಯಾನಿಂಗ್ ಮಿಷನ್, ಎಕ್ಸರೆ ಮಿಷನ್
ಗಳು ಆಗಾಗ ಕೆಡುತ್ತಲೇ ಇರುತ್ತವೆ, ಹಲವು ಬಾರಿ ರಿಪೇರಿ ಮಾಡಿಸಿ ಅದನ್ನೇ ತಂದು ಇಲ್ಲಿ ಹಾಕಲಾಗಿದೆ.ಹೀಗೆ ಪದೇ,ಪದೇ ರಿಪೇರಿ ಮಾಡಿಸುವ ಬದಲು ಹೊಸದಾದ ಮಿಷನ್ ಗಳನ್ನು ಸರ್ಕಾರಕ್ಕೆ ಮಾಹಿತಿ ನೀಡಿ ಇಲ್ಲಿನ ಜನ ಪ್ರತಿನಿಧಿಗಳು ತರಿಸಿ ಹಾಕಿದರೆ ಗ್ರಾಮೀಣ ಪ್ರದೇಶದ ಜನರಿಗೆ ಬಹಳ ಉಪಕಾರವಾಗುತ್ತದೆ. ಖಾಸಗಿ ಆಸ್ಪತ್ರೆಗೆ ಹಣ ತೆರುವುದು ತಪ್ಪುತ್ತದೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲೇ ಉತ್ತಮ ಸೌಲಭ್ಯ ಸಿಗುತ್ತದೆ.