ಹುಣಸೂರು: ಹುಣಸೂರು ಬಸ್ ನಿಲ್ದಾಣ ಕೆಎಸ್ಆರ್ಟಿಸಿ ಬಸ್ ಗಳು ನಿಲುಗಡೆ ಮಾಡಲು ಇರುವುದೊ ಅಥವಾ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಲು ಇರುವುದಾ ಎಂಬ ಸಂಶಯ ಬರುವಂತಾಗಿದೆ.
ಏಕೆಂದರೆ ಬೆಳಗಿನಿಂದ ರಾತ್ರಿವರೆಗೂ ಹುಣಸೂರು ಬಸ್ ನಿಲ್ದಾಣದಲ್ಲಿ ನೂರಾರು ದ್ವಿಚಕ್ರ ವಾಹನಗಳು ಪಾರ್ಕಿಂಗ್ ಮಾಡಲಾಗಿರುತ್ತದೆ,ಜತೆಗೆ ಅಲ್ಲೇ ಸಮೀಪದಲ್ಲೇ ಸಣ್ಣ ವಾಹನಗಳು ಕೂಡಾ ಬಸ್ ನಿಲ್ದಾಣದ ಮುಂದುಗಡೆ ಪಾರ್ಕಿಂಗ್ ಮಾಡಲಾಗಿರುತ್ತದೆ ಇದನ್ನು ಹೇಳುವವರು ಕೇಳುವವರು ಯಾರು ಇಲ್ಲವೆ?.

ಹೀಗೆ ನೂರಾರು ದ್ವಿಚಕ್ರ ವಾಹನಗಳು ಬಸ್ ನಿಲ್ದಾಣದ ಒಳಗೆ ನಿಂತರೆ ಗ್ರಾಮಾಂತರ ಪ್ರದೇಶಗಳಿಗೆ ಹುಣಸೂರು ಬಸ್ ನಿಲ್ದಾಣದಿಂದ ಹೋಗಲು ಮತ್ತು ಬಸ್ ನಿಲ್ದಾಣದ ಒಳಗೆ ಬರಲು ಬಸ್ ಚಾಲಕರಿಗೆ ತೊಂದರೆ ಆಗುತ್ತದೆ ಎಂಬ ಸಾಮಾನ್ಯ ಪರಿಜ್ಞಾನ ಕೂಡ ಈ ವಾಹನ ಸವಾರರಿಗೆ ಇಲ್ಲದಿರುವುದು ದುರ್ದೈವ.
ಹೀಗೆ ಅಡ್ಡದಿಡ್ಡಿಯಾಗಿ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿ ಹೋಗಿಬಿಟ್ಟರೆ ನಿಲ್ದಾಣದಿಂದ ಹೊರಡುವ ಮತ್ತು ಒಳಗೆ ಬರುವ ಬಸ್ ಗಳು ಹೇಗೆ ಸಂಚರಿಸಬೇಕು ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಪ್ರಶ್ನಿಸಿದ್ದಾರೆ.
ಇಲ್ಲೇ ಸುತ್ತಮುತ್ತಲ ಅಂಗಡಿಗಳವರು ವಿವಿಧ ಕಚೇರಿಗೆ ಹೋಗುವವರು ಇಲ್ಲಿ ತಮ್ಮ ದ್ವಿಚಕ್ರ ವಾಹನಗಳನ್ನ ಪಾರ್ಕಿಂಗ್ ಮಾಡಿ ಹೋಗುತ್ತಿರಬಹುದು ಎಂಬ ಸಂಶಯ ಕಾಡುತ್ತಿದೆ ಕೂಡಲೇ ಕೆ ಎಸ್ ಆರ್ ಟಿ ಸಿ ಹಿರಿಯ ಅಧಿಕಾರಿಗಳು ಮತ್ತು ಬಸ್ ನಿಲ್ದಾಣದ ಅಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇಲ್ಲವೇ ಬಸ್ ನಿಲ್ದಾಣದ ಆವರಣದ ಒಂದು ಭಾಗದಲ್ಲಿ ಸ್ಥಳಾವಕಾಶ ಮಾಡಿ ಪಾರ್ಕಿಂಗ್ ಮಾಡಲು ಅವಕಾಶ ಕೊಟ್ಟು ಅವರಿಂದ ದಿನಕ್ಕೆ ಇಷ್ಟು ಎಂದು ಬಾಡಿಗೆ ಪಡೆದರೆ ಬಸ್ ನಿಲ್ದಾಣದ ಅಭಿವೃದ್ಧಿಗೊ ಹಣ ಸಿಗುತ್ತದೆ ಆ ಬಗೆಯಾದರೂ ಚಿಂತನೆ ಮಾಡಬಹುದು. ಇಲ್ಲದಿದ್ದರೆ ಹೀಗೆ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿದರೆ ಬಸ್ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ತೊಂದರೆ ಆಗುತ್ತದೆ ಎಂಬ ಸಾಮಾನ್ಯ ಪರಿಜ್ಞಾನ ಬೇಡವೇ ಎಂದು ಚೆಲುವರಾಜು ಕಿಡಿಕಾರಿದ್ದಾರೆ.
ಹೀಗೆ ದ್ವಿಚಕ್ರವಾಹನ ಅಡ್ಡಾದಿಡ್ಡಿ ನಿಲ್ಲಿಸಿದ್ದರ ಬಗ್ಗ ಪ್ರಶ್ನೆ ಮಾಡಿದ್ದಕ್ಕೆ ಹೋಂ ಗಾರ್ಡ್ ಒಬ್ಬರಿಗೆ ವಾಹನ ಸವಾರ ಹಲ್ಲೆ ಮಾಡಿದ ಉದಾಹರಣೆ ಕೂಡ ಇದೆ. ಹೀಗೆ ಗಲಾಟೆಗೆ ಅವಕಾಶ ಮಾಡಿಕೊಡುವ ಬದಲು ನ್ಯಾಯ ರೀತಿಯಲ್ಲಿ ಪಾರ್ಕಿಂಗ್ ಗೆ ದ್ವಿಚಕ್ರ ವಾಹನ ಸವಾರರಿಂದ ಹಣ ಪಡೆಯುವುದರಿಂದ ಸರ್ಕಾರಕ್ಕೆ ಹಣ ಬರುತ್ತದೆ ಎಂದು ಚಲುವರಾಜು ಅವರು ಸಲಹೆ ನೀಡಿದ್ದಾರೆ.