ದಸರಾ ಚಲನಚಿತ್ರೋತ್ಸವ: ಉತ್ತಮ ಕಿರುಚಿತ್ರ ಆಯ್ಕೆಗಾಗಿ ಪರಿಣಿತರ ವೀಕ್ಷಣೆ

Spread the love

ಮೈಸೂರು: 2024ರ ದಸರಾ ಚಲನ ಚಿತ್ರೋತ್ಸವ ಪ್ರಯುಕ್ತ ಆಯೋಜಿಸಿದ್ದ ಕಿರು ಚಿತ್ರಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಿತ್ರಗಳನ್ನು ಪರಿಣಿತರು ವೀಕ್ಷಿಸಿದರು.

ಈ ಬಾರಿಯ ದಸರಾ ಚಲನಚಿತ್ರೋತ್ಸವದಲ್ಲಿ ಕಿರು ಚಿತ್ರ ತಯಾರಿಕೆ ಸ್ಪರ್ಧೆ ಸೇರಿದಂತೆ ಹಲವು ವಿಶೇಷತೆಗಳನ್ನು ನೀಡಲು ಚಲನ ಚಿತ್ರೋತ್ಸವ ಉಪ ಸಮಿತಿ ಸಿದ್ಧತೆ ನಡೆಸಿದೆ.

ತೀರ್ಪುಗಾರರಿಂದ ಆಯ್ಕೆಯಾದ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅತ್ಯುತ್ತಮ ಕಿರು ಚಿತ್ರಗಳನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗುವುದು.

ಕಿರುಚಿತ್ರಗಳ ಸ್ಪರ್ಧೆಗೆ 63 ಕನ್ನಡ ಭಾಷೆ, 2 ಮೂಕಿ ಚಿತ್ರ, 1 ಕೊಡವ, 1 ಹಿಂದಿ, 4 ತಮಿಳು ಹಾಗೂ 1 ಲಂಬಾಣಿ ಭಾಷೆಯ ಕಿರುಚಿತ್ರಗಳು ಬಂದಿವೆ.

ಸ್ಪರ್ಧೆಗೆ ಬಂದಂತಹ ಕಿರು ಚಿತ್ರಗಳ ಆಯ್ಕೆ ಸಂಬಂಧ ತೀರ್ಪು ಗಾರರಾಗಿ ರಂಗಭೂಮಿ ಕಲಾವಿದರು ಹಾಗೂ ಚಲನಚಿತ್ರ ನಟರು, ಕಿರುತರೆ ನಟರಾದ ಶಿವಾಜಿ ರಾವ್ ಜಾಧವ್, ಹಿರಿಯ ಚಲನಚಿತ್ರ ಛಾಯಾಗ್ರಾಹಕರು ಹಾಗೂ ನಿರ್ದೇಶಕರಾದ ಜನಾರ್ಧನ್, ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಸಪ್ನಾ.ಎಸ್.ಎಂ, ನಟ ಕೆ.ಜೆ.ಪವನ್ ಅವರು ಭಾಗವಹಿಸಿದ್ದರು.

ಈ ವೇಳೆ ‌ದಸರಾ ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿ ಡಾ. ಕೆ.ಎನ್. ಬಸವರಾಜು, ಸಮಿತಿಯ ಕಾರ್ಯಾಧ್ಯಕ್ಷ ರಂಗೇಗೌಡ, ಸಮಿತಿಯ ಕಾರ್ಯದರ್ಶಿ ಹರೀಶ್ ಟಿ.ಕೆ. ಹಾಗೂ ಚಲನ ಚಿತ್ರೋತ್ಸವದ ಸಹ ಸಂಯೋಜಕ ಶ್ರೇಯಸ್ ಮತ್ತಿತರರು ಉಪಸ್ಥಿತರಿದ್ದರು.