(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದಿಂದ ತಾಲ್ಲೂಕಿನ ಪಾಳ್ಯ ಮಾರ್ಗವಾಗಿ ಕೊತ್ತನೂರು, ಚಿಕ್ಕಲ್ಲೂರು, ತೆಳ್ಳನೂರು, ಬಂಡಳ್ಳಿ, ಹನೂರು ಪಟ್ಟಣಕ್ಕೆ ಬಂದು ಹೋಗುವ ಬಸ್ ಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ಚಿಕ್ಕಲೂರಿನಲ್ಲಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಬಸ್ ಬೇಕೆಂಬುದು ಈ ಭಾಗದ ಜನರ ಬಹು ದಿನಗಳ ಬೇಡಿಕೆ ಆಗಿತ್ತು,ಆದರೆ ಈಗ ಚಾಲನೆ ನೀಡಲಾಗುತ್ತಿದೆ. ಇದನ್ನು ಈ ಭಾಗದ ಮುಖಂಡ ತೆಳ್ಳನೂರು ಪುಟ್ಟಮಾದಯ್ಯನವರ ಸ್ಮರಣಾರ್ಥಕವಾಗಿ ಅರ್ಪಿಸುತ್ತಿದ್ದೇನೆ ಎಂದು ತಿಳಿಸಿದರು.
ಈ ಮಾರ್ಗದ ಬಸ್ ಗಾಗಿ ಅವರು ಸಾಕಷ್ಟು ಮನವಿ ಮಾಡಿದ್ದರು ಆದರೆ ಅವರು ಈಗ ನಮ್ಮೊಡನೆ ಇಲ್ಲ ಕಳೆದ 20 ದಿನಗಳ ಹಿಂದಷ್ಟೇ ಅವರು ತೀರಿಕೊಂಡಿದ್ದಾರೆ ಎಂದು ಸ್ಮರಿಸಿದರು.
ಮುಖ್ಯವಾಗಿ ಶಾಲಾ ಮಕ್ಕಳು ದಿನಗೂಲಿ ಕೆಲಸಕ್ಕೆ ಹೋಗುವವರು ಹಾಗೂ ನೌಕರರಿಗೆ ಸಕಾಲಕ್ಕೆ ಕೆಲಸ ಕಾರ್ಯಗಳಿಗೆ ಹಾಜರಾಗಲು ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಬಸ್ ಕಾರ್ಯನಿರ್ವಹಿಸಲಿದೆ ಎಂದ ಹೇಳಿದರು.
ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಚಿಕ್ಕಲ್ಲೂರು ದೇವಸ್ಥಾನಕ್ಕೆ ಈಗ ಹನೂರು ಹಾಗೂ ಕೊಳ್ಳೇಗಾಲ 2 ಮಾರ್ಗದಿಂದಲೂ ಭಕ್ತರು ಬಂದು ಹೋಗಲು ಈ ಮಾರ್ಗದ ಬಸ್ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ಹಲವು ಕಡೆಗಳಲ್ಲಿ ಇನ್ನು ಸಾರಿಗೆ ಸೌಲಭ್ಯ ವ್ಯವಸ್ಥೆ ಸಮರ್ಪಕವಾಗಿ ಆಗಿಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗಳಲ್ಲಿ ಸರ್ಕಾರಿ ಬಸ್ ಸಂಚರಿಸುವ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ. ಅದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಸಾರಿಗೆ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಶಾಸಕ ಮಂಜುನಾಥ್ ಸರ್ಕಾರಿ ಬಸ್ ನಲ್ಲಿ ಜನ ಸಾಮಾನ್ಯರ ಜೊತೆ ಸಂಚಾರ ಮಾಡುವ ಮೂಲಕ ಸರಳತೆ ಮೆರೆದರು.
ಈ ಸಂದರ್ಭದಲ್ಲಿ ಮುಖಂಡರಾದ ಬಂಡಳ್ಳಿ ಜೆಸ್ಸಿಂಗ್ ಪಾಷ, ವಿಜಯಕುಮಾರ್, ಸಿಂಗಾನಲ್ಲೂರು ರಾಜಣ್ಣ, ಚಿಕ್ಕಲ್ಲೂರು ಪಿ.ಡಿ.ಒ ಶಿವಕುಮಾರ್, ಡಿಪೋ ಮ್ಯಾನೇಜರ್ ಬೋಗನಾಯಕ್, ಚರಣ್ ಗ್ರಾಮಸ್ಥರು ಹಾಗೂ ಇನ್ನಿತರ ಮುಖಂಡರುಗಳು ಹಾಜರಿದ್ದರು.
