ಹೆಚ್.ಡಿ.ಕೋಟೆ: ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು, ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂದು ಮುಖ್ಯಮಂತ್ರಿ ಅವರಿಂದ ಹಿಡಿದು ಎಲ್ಲಾ ಜನ ಪ್ರತಿನಿಧಿಗಳು ಭಾಷಣದಲ್ಲಿ ಹೇಳುತ್ತಲೇ ಇರುತ್ತಾರೆ ಆದರೆ ಇದು ಎಷ್ಟರಮಟ್ಟಿಗೆ ಫಲ ಕೊಟ್ಟಿದೆ?.
ಗ್ರಾಮೀಣ ಪ್ರದೇಶದ ಅದೆಷ್ಟೂ ಶಾಲೆಗಳು ಅದರಲ್ಲೂ ಸರ್ಕಾರಿ ಶಾಲೆಗಳು ಈಗಲೂ ಅಭಿವೃದ್ಧಿ ಕಾಣದೆ, ಮಕ್ಕಳ ಹಾಜರಾತಿ ಇಲ್ಲದೆ ಕನಿಷ್ಠಪಕ್ಷ ರಸ್ತೆ ಸಂಪರ್ಕವು ಇಲ್ಲದೆ ಸೊರಗುತ್ತಿವೆ. ಇದಕ್ಕೆ ಎಚ್ ಡಿ ಕೋಟೆ ತಾಲೂಕು ಅಣ್ಣೂರು ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪಕ್ಕಾ ಉದಾಹರಣೆಯಾಗಿದೆ.
ಅಣ್ಣೂರು ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಸುಮಾರು ಹದಿನೈದು ವರ್ಷದ ಹಿಂದೆ ಹೊಸದಾಗಿ ನಿರ್ಮಿಸಲಾಗಿದೆ. ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಶ್ರಮಪಟ್ಟು ಸುಂದರವಾದ ಕೈ ತೋಟವನ್ನು ನಿರ್ಮಿಸಿದ್ದಾರೆ ಇಲ್ಲಿ ಸುಮಾರು 40ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ.
ಮಕ್ಕಳೇನೊ ಉತ್ಸಾಹದಿಂದ ಶಾಲೆಗೆ ಬರಲು ಸಿದ್ದರಾಗಿರುತ್ತಾರೆ, ಆದರೆ ಈ ಅಣ್ಣೂರು ಕಾಲೋನಿಯಿಂದಲೇ ಬಹಳಷ್ಟು ಮಕ್ಕಳು ಇಲ್ಲಿಗೆ ಬರುವುದರಿಂದ ಅವರಿಗೆ ಸರಿಯಾದ ರಸ್ತೆಯೇ ಇಲ್ಲ ಹಾಗಾಗಿ ಜಮೀನು, ಕಲ್ಲು ಮುಳ್ಳು ಹಾದಿಯಲ್ಲಿ ಬರಬೇಕಾಗಿದೆ.
ಎಚ್ ಡಿ ಕೋಟೆ ಶಾಸಕರಾದ ಅನಿಲ್ ಚಿಕ್ಕಮಾದು ಅವರಿಗೆ ಶಾಲೆ ವತಿಯಿಂದ ಈಗಾಗಲೇ ಹಲವು ಬಾರಿ ರಸ್ತೆ ಸಂಪರ್ಕ ಕಲ್ಪಿಸಿ ಕೊಡಬೇಕೆಂದು ಪತ್ರಗಳನ್ನು ಬರೆಯಲಾಗಿದೆ, ಆದರೆ ಯಾವುದೇ ಪ್ರಯೋಜನ ಆಗಿಲ್ಲ.
ಜೊತೆಗೆ ಇದರ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಕೂಡ ಈ ಶಾಲೆಯ ಬಗ್ಗೆ ಗಮನಹರಿಸುವ ಅತ್ಯಗತ್ಯವಿದೆ. ಕೂಡಲೇ ಶಾಸಕ ಅನಿಲ್ ಚಿಕ್ಕಮಾದು ಅವರು ಶಾಲೆಗೆ ಒಮ್ಮೆಯಾದರೂ ಭೇಟಿ ನೀಡಿ ಇಲ್ಲಿಗೆ ರಸ್ತೆ ಸಂಪರ್ಕವನ್ನು ಕಲ್ಪಿಸಿ ಕೊಡುವ ಜರೂರತಿ ಇದೆ.
ಪಾಪ ಪುಣ್ಯಾತ್ಮರು ತಮ್ಮ ಹಾಡಿಯಲ್ಲಿ ಶಾಲೆ ಇರಬೇಕೆಂದು ತಮ್ಮ ಜಮೀನಿನ ಹತ್ತು ಗಂಟೆ ಜಾಗವನ್ನು ಶಾಲೆಗಾಗಿ ಬಿಟ್ಟುಕೊಟ್ಟಿದ್ದಾರೆ. ಆದರೆ ಈ ಶಾಲೆ ರಸ್ತೆಯ ಭಾಗವನ್ನು ಬಲಾಡ್ಯರು ಒತ್ತುವರಿ ಮಾಡಿಕೊಂಡಿರುವುದರಿಂದ ಈಗ ಇಂತಹ ಒಂದು ಶಾಲೆಗೆ ರಸ್ತೆಯೇ ಇಲ್ಲದಿರುವುದು ನಿಜಕ್ಕೂ ದುರ್ದೈವ.
ರಸ್ತೆ ಇಲ್ಲದೆ ಈ ಶಾಲೆಗೆ ಹೋಗಿ ಬರಲು ಮಕ್ಕಳು, ಶಿಕ್ಷಕರು ಮತ್ತು ಶಾಲೆಗೆ ಬಿಸಿಯೂಟ ತರುವವರು,ಬಿಸಿ ಊಟದ ಸಾಮಗ್ರಿಗಳನ್ನು ಹೊತ್ತು ಬರುವವರಿಗೆ ಬಹಳ ತೊಂದರೆಯಾಗುತ್ತಿದೆ.
ಇನ್ನಾದರೂ ಈ ಸರ್ಕಾರಿ ಶಾಲೆಗೆ ಸರಿಯಾದ ರಸ್ತೆ ಸಂಪರ್ಕವನ್ನು ಕಲ್ಪಿಸಲು ಸರ್ಕಾರ ಮತ್ತು ಸ್ಥಳೀಯ ಆಡಳಿತ ಹಾಗೂ ಶಾಸಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಕ್ಷಣ ಗಮನ ಹರಿಸಬೇಕಿದೆ.
ಕೊಡಲೇ ಅಣ್ಣೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರಸ್ತೆ ಮಾಡಿಕೊಡಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತಿತರರು ಒತ್ತಾಯಿಸಿದ್ದಾರೆ.