ಬೆಂಗಳೂರು: ಐಶ್ವರ್ಯ ಗೌಡ ಎಂಬ ಮಹಿಳೆ ನನಗೆ ಪರಿಚಯವಿಲ್ಲ, ನನ್ನ ಹೆಸರು ಹೇಳಿಕೊಂಡು ಮೋಸ ಮಾಡಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಸ್ಪಷ್ಟಪಡಿಸಿದರು.
ಇ ಡಿ ವಿಚಾರಣೆಗೆ ಹಾಜರಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇ ಡಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ ನಾನು ಎಲ್ಲ ಸಹಕಾರ ನೀಡಿದ್ದೇನೆ ಎಂದು ತಿಳಿಸಿದರು.
ಐಶ್ವರ್ಯ ಗೌಡ ಎಂಬ ಮಹಿಳೆಯನ್ನ ನಾನು ನೋಡಿಲ್ಲ ಅವರ ಯಾವುದೇ ವ್ಯವಹಾರಗಳಿಗೂ ನನಗೂ ಸಂಬಂಧವೂ ಇಲ್ಲ, ಆದರೆ ನನ್ನ ಪರಿಚಯವಿದೆ ಎಂದು ಹೇಳಿಕೊಂಡು ಯಾರಿಗೋ ಮೋಸ ಮಾಡಿದ್ದರೆ ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.
ಬಿಜೆಪಿ ನನ್ನನ್ನಾಗಲಿ ಅಥವಾ ಕಾಂಗ್ರೆಸ್ ಪಕ್ಷವನ್ನು ಆಗಲಿ ಟಾರ್ಗೆಟ್ ಮಾಡಿದೆ ಎಂದು ನಾನು ಹೇಳುವುದಿಲ್ಲ ಇದಕ್ಕೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಡಿ.ಕೆ ಸುರೇಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚಿನ್ನದ ಹೂಡಿಕೆಯಲ್ಲಿ ವಂಚನೆ ಆರೋಪದ ಮೇಲೆ ಐಶ್ವರ್ಯ ಗೌಡಳನ್ನು ಬಂಧಿಸಲಾಗಿತ್ತು.
ತಾನು ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು ಆಕೆ ಬಹುಕೋಟಿ ಹಗರಣ ನಡೆಸಿದ್ದರು. ಈ ಪ್ರಕರಣದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಅವರಿಗೂ ಇ.ಡಿ ಸಮನ್ಸ್ ಜಾರಿ ಮಾಡಿತ್ತು. ಹಾಗಾಗಿ ಇಂದು ಡಿ.ಕೆ.ಸುರೇಶ್ ಇ ಡಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು.
