ಮಣ್ಣಿನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ: ಪ್ರಿಯಕರನೆ ಕೊಲೆಗಾರ!

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ಬಳಿ ಮಹಿಳೆಯನ್ನು ಕೊಲೆ ಮಾಡಿ ಹೂತು ಹಾಕಿದ್ದು ಆಕೆಯ ಪ್ರಿಯಕರನೇ ಎಂದು ಪೊಲೀಸರು ತಿಳಿಸಿದ್ದು,ಈತ ಈಗ ಕಂಬಿ ಎಣಿಸುತ್ತಿದ್ದಾನೆ.

ಕೊಳ್ಳೇಗಾಲ ಮೋಳೆಯ ಸೋನಾಕ್ಷಿ (29) ಯನ್ನು ಆಕೆಯ ಪ್ರಿಯಕರ ಅದೇ ಬಡಾವಣೆಯ ನಂಜಯ್ಯನ ಮಗ ಮಾದೇಶ ಅಲಿಯಾಸ್ ಮಹೇಶ್ ಕೊಲೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ.

ಉಪ್ಪಾರ ಬಡಾವಣೆಯ ಕುಮಾರ್ ಎಂಬುವ ಮಗಳು ಸೋನಾಕ್ಷಿ ಅದೇ ಬಡಾವಣೆಯಲ್ಲಿರುವ ಸೋದರಮಾವ ವಿಜಯ್ ಕುಮಾರ್ ನನ್ನು ಮದುವೆಯಾಗಿದ್ದಳು ಇವರಿಗೆ ಒಂದು ಹೆಣ್ಣು ಒಂದು ಗಂಡು ಇಬ್ಬರು ಮಕ್ಕಳಿದ್ದಾರೆ.

ಸೋನಾಕ್ಷಿಗೆ ಬಡಾವಣೆಯ ಮಹೇಶ್ ನೊಡನೆ ಅಕ್ರಮ ಸಂಬಂಧವಿತ್ತು. ಹಾಗಾಗಿ ಸೋನಾಕ್ಷಿ ಗಂಡನ ಜೊತೆ ಭಿನ್ನಾಭಿಪ್ರಾಯ ಮಾಡಿಕೊಂಡು ಆಗಾಗ ಮನೆಯಿಂದ ನಾಪತ್ತೆಯಾಗುವ ಚಾಳಿ ಬೆಳೆಸಿಕೊಂಡಿದ್ದಳು.

ಎರಡು ಮೂರು ಬಾರಿ ಗಂಡನನ್ನು ಬಿಟ್ಟು ನಾಪತ್ತೆಯಾಗಿದ್ದಳು, ಅದೇ ರೀತಿ ಕಳೆದ ಫೆಬ್ರವರಿ ತಿಂಗಳಲ್ಲೂ ಕಾಣಿಯಾಗಿದ್ದಳು ಈ ವೇಳೆ ಪೊಲೀಸರು ಪತ್ತೆ ಹಚ್ಚಿ ಕರೆತಂದು ಆಕೆಯ ತಾಯಿ ಹಾಗೂ ಸೋದರನ ಜೊತೆ ತವರು ಮನೆಗೆ ಕಳುಹಿಸಿದ್ದರು.

ಸೋನಾಕ್ಷಿಯ ಮೃತದೇಹ ಜೂ.19 ರಂದು ಗುರುವಾರ ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದ ಸ್ಥಿತಿಯಲ್ಲಿ ಪತ್ತೆ ಯಾಗಿತ್ತು.

ಅಂದು ಶಶಿಕುಮಾರ್ ಎಂಬುವವರು ದನ ಮೇಯಿಸುತ್ತಿದ್ದ ವೇಳೆ ನಾಯಿಗಳು ಭೂಮಿಯಲ್ಲಿ ಹೂತಿದ್ದ ದೇಹದ ವಾಸನೆ ಹಿಡಿದು ಮಣ್ಣು ಎರಚಾಡಿ ಎಳೆದಾಡುತ್ತಿದ್ದುದ್ದು ಕಂಡು ಅಲ್ಲಿಗೆ ಹೋಗಿ ನೋಡಿದಾಗ ಶವದ ಮುಂಗೈ ಭೂಮಿಯಿಂದ ಹೊರಚಾಚಿರುವುದು ಕಾಣಿಸಿತ್ತು.

ಶಶಿಕುಮಾರ್ ಗಾಬರಿಯಾಗಿ ಪಟ್ಟಣ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದರು.

ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಶಿವ ಮಾದಯ್ಯ, ಪಿ.ಎಸ್.ಐ ವರ್ಷ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಅಂದು ರಾತ್ರಿಯೇ ಚಾಮರಾಜನಗರದ ಸಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಶವ ಗುರುತು ಪತ್ತೆಗಾಗಿ ಇರಿಸಿದ್ದರು.ನಂತರ ಸೋನಾಕ್ಷಿ ತಾಯಿ ರಜನಿ ಮೃತ ದೇಹ ತಮ್ಮ ಮಗಳದ್ದೆಂದು ಗುರುತಿಸಿದ್ದರು.

ದೇಹದ ಬಲಗೆನ್ನೆಯ ಮೇಲೆ, ಎಡಭಾಗದ ಹಣೆಯ ಹತ್ತಿರ, ತಲೆಯ ಮೇಲ್ಬಾಗದಲ್ಲಿ ಹೊಡೆದಿರುವ ಗಾಯ ಕಂಡು ಬಂದಿತ್ತು.

ಐದಾರು ದಿನಗಳ ಹಿಂದೆ ಮೋಳೆ ಬಡಾವಣೆಯ ನಂಜಯ್ಯನ ಮಗ ಮಾದೇಶ ಅಲಿಯಾಸ್ ಮಹೇಶ್, ಕೆಂಚಶೆಟ್ಟಿ ಮಗ ಬಾಬು ಅಲಿಯಾಸ್ ಚಿಕ್ಕಬಾಬು ಅವರು ಸೋನಾಕ್ಷಿಯನ್ನು ಕೊಲೆ ಮಾಡಿ ಮಣ್ಣಿನಲ್ಲಿ ಹೂತಾಕಿದ್ದಾರೆಂದು ಅನುಮಾನ ವ್ಯಕ್ತ ಪಡಿಸಿ ಮೃತಳ ತಾಯಿ ರಜಿನಿ ದೂರು ನೀಡಿದ್ದರು.

ಪಟ್ಟಣ ಪೊಲೀಸ್ ಠಾಣೆಯ ಎಸೈ ವರ್ಷ ಅವರು ಪ್ರಕರಣ ದಾಖಲಸಿಕೊಂಡು ತನಿಖೆ ಪ್ರಾರಂಭಿಸಿದ್ದರು.

ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿ ಮಾದೇಶ ಅಲಿಯಾಸ್ ಮಹೇಶ್, ಬಾಬು ಅಲಿಯಾಸ್ ಚಿಕ್ಕ ಬಾಬು ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮಾದೇಶ ಅಲಿಯಾಸ್ ಮಹೇಶ್ ಸೋನಾಕ್ಷಿಯ ಜೊತೆ ಅಕ್ರಮ ಸಂಬಂಧ ಇಟ್ಟು ಕೊಂಡು ಬಸ್ತೀಪುರ ಬಡಾವಣೆಯಲ್ಲಿ ಮನೆ ಮಾಡಿ ಇರಿಸಿಕೊಂಡಿದ್ದ ಎಂಬುದು ಗೊತ್ತಾಗಿದೆ.

ಜೂನ್ 13 ರಂದು ಇಬ್ಬರ ನಡುವೆ ಜಗಳವಾಗಿದೆ,ಮರುದಿನವೂ ಮತ್ತೆ ಇಬ್ಬರ ನಡುವೆ ಜಗಳವಾಗಿ ಸೋನಾಕ್ಷಿಗೆ ಹಲ್ಲೆ ಮಾಡಿ ಸಾಯಿಸಿ ಬೈಕ್‌ನಲ್ಲಿ ಹಾಕಿ ಕೊಂಡು ಹಳೇ ಹಂಪಾಪುರ ಸುವರ್ಣಾವತಿ ನದಿಯ ಬಳಿ ತಂದಿದ್ದಾನೆ.

ಅಲ್ಲೆ ಇದ್ದ ಮಾವಟಿಯಿಂದ ಮಣ್ಣನ್ನು ತೆಗೆದು ಗುಂಡಿ ಯೊಳಗೆ ಹೂತು ಹಾಕಿದ್ದೆ ಎಂದು ಪೊಲೀಸ್ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.

ಬಾಬು ಅಲಿಯಾಸ್ ಚಿಕ್ಕಬಾಬು ನನ್ನು ಸಹ ವಿಚಾರಣೆ ನಡೆಸಲಾಗಿದೆ. ಕೊಲೆಗೆ ಮತ್ತಷ್ಟು ಸಾಕ್ಷಿಗಳು ದೊರಕದ ಕಾರಣ ಪೊಲೀಸ್ ಅಧಿಕಾರಿಗಳು ಈ ಇಬ್ಬರು ಆರೋಪಿಗಳ ವಿಚಾರಣೆಯನ್ನು ಮುಂದುವರಿ ಸಿದ್ದಾರೆ.